ಬೆಂಗಳೂರು, ಜ.26: ರಾಜ್ಯ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಎಲ್ಲಾ ಐದು ಗ್ಯಾರಂಟಿಗಳಾದ ಶಕ್ತಿಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ  ಬಗ್ಗೆ ಸಂತೋಷವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಹೇಳಿದ್ದಾರೆ.ರಾಜ್ಯದಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.ಈ ಐತಿಹಾಸಿಕ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅವಕಾಶವನ್ನು ಒದಗಿಸುವುದರೊಂದಿಗೆ, ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧೈಯವನ್ನು ಹೊಂದಿದೆ. ಆ ಮೂಲಕ ನಾಗರೀಕರು ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ. ಸಂವಿಧಾನದ ಈ ಆಶಯಗಳನ್ನು ಸಾಕಾರಗೊಳಿಸಲು ರಾಜ್ಯ  ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.ಜೂನ್ 11 2023, ರಂದು ಮಹತ್ವಾಕಾಂಕ್ಷಿ ಯೋಜನೆಯಾದ "ಶಕ್ತಿ ಯೋಜನೆ"-"ಮಹಿಳೆಯರಿಗೆ ಉಚಿತ ಪ್ರಯಾಣ"ವನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಯಿಟ್ಟಿದೆ. ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಸೇರಿದಂತೆ, ರಾಜ್ಯದ 3.5 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 134.34 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿಯೋಜನೆಯಡಿ ಪ್ರಯಾಣ ಮಾಡಿದ್ದಾರೆ.  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5ಕೆ.ಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 5ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ಫಲಾನುಭವಿಗೆ 10ಕೆ.ಜಿ ಆಹಾರಧಾನ್ಯವನ್ನು ವಿತರಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಪ್ರಸ್ತುತ ಈ ಯೋಜನೆಗೆ ಅಗತ್ಯವಿರುವ ಆಹಾರ ಧಾನ್ಯ ಲಭ್ಯವಾಗುವವರೆಗೆ ರಾಜ್ಯದ ಅರ್ಹ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಹೆಚ್ಚುವರಿ 5ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಕುಟುಂಬದ ಸದಸ್ಯರುಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ. ಜುಲೈ 2023 ಮಾಹೆಯಿಂದ ನವೆಂಬರ್ 2023ರ ಅಂತ್ಯಕ್ಕೆ ಒಟ್ಟು ರೂ.2900.12 ಕೋಟಿ ಮೊತ್ತದ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದರು.ದಿನಾಂಕ: 01.07.2023ರಿಂದ ಜಾರಿಗೆ ಬರುವಂತೆ "ಗೃಹಜ್ಯೋತಿ" ಯೋಜನೆಯನ್ನು ಜಾರಿಗೊಳಿಸಿ, ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್‌ಗಳ ಗರಿಷ್ಠ ಬಳಕೆಯ ಮಿತಿಗೆ ಒಳಪಟ್ಟು ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ನಾಡಿನ 1.50ಕೋಟಿ ಗ್ರಾಹಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಸರ್ಕಾರವು ಪ್ರತಿ ತಿಂಗಳೂ ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೆ de.700 ಕೋಟಿಗಳ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ.ರಾಜ್ಯದಲ್ಲಿರುವ ಪುತಿ ಕುಟುಂಬದಲ್ಲಿನ ಅರ್ಹ ಯಜಮಾನಿಗೆ ಪ್ರತಿ ತಿಂಗಳು ರೂ.2,000/- ಗಳನ್ನು ನೀಡುವ “ಗೃಹಲಕ್ಷ್ಮಿ" ಯೋಜನೆಯಡಿ ರೂ 17500 ಕೋಟಿ ಅನುದಾನವನ್ನು ನಿಗದಿ  ಪಡಿಸಲಾಗಿದೆ. ಈ ಯೋಜನೆಯಡಿ ನೋಂದಾಯಿಸಿ ಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಈವರೆಗೆ ರೂ.8181.00 ಕೋಟಿ ನೆರವು ವರ್ಗಾಯಿಸಲಾಗಿದೆ. "ಯುವನಿಧಿ ಯೋಜನೆಯಡಿ 2022-23 ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೋಮಾ ಹೊಂದಿದವರು 180 ದಿನಗಳು ಪೂರ್ಣಗೊಂಡರೂ ಉದ್ಯೋಗವನ್ನು ಪಡೆಯದೆ ಇದ್ದರೆ ಕ್ರಮವಾಗಿ ಮಾಸಿಕ ರೂ.3000/- ಮತ್ತು ರೂ.1500/- ಗಳ ನಿರುದ್ಯೋಗ ಭತ್ಯೆಯನ್ನು ಎರಡು ವರ್ಷದ ಅವಧಿಗೆ ಅಥವಾ ಎರಡು ವರ್ಷದೊಳಗೆ ಉದ್ಯೋಗ ಪಡೆಯುವವರೆಗೆ ಪಾವತಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ ಜಯಂತಿಯಂದು ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ, ಸರ್ಕಾರವು ನೀಡಿದ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬದ್ಧತೆಯನ್ನು ಮೆರೆದಿದೆ ಎಂದು ಶ್ಲಾಘಿಸಿದರು. ಸಂವಿಧಾನ ಅನುಷ್ಠಾನಗೊಂಡ 75ನೇ ವರ್ಷದಲ್ಲಿ ಕರ್ನಾಟಕ ಹಾಗೂ ಭಾರತವು ಅಭೂತಪೂರ್ವ ಪುಗತಿಯನ್ನು ಸಾಧಿಸಿವೆ. ಇದು ನಾವು 1950 ರಲ್ಲಿ ನಮ್ಮ ಅದ್ಭುತ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡ ಕಾರಣದಿಂದಾಗಿ ಸಾಧ್ಯವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ತಂಡದ ಸದಸ್ಯರ ದೂರದೃಷ್ಟಿಗೆ ನಾವು ಅಭಾರಿಯಾಗಿದ್ದೇವೆ. ಅವರು ನಮಗೆ ಪ್ರಗತಿಯ ದಾರಿಯಲ್ಲಿ ನಡೆಯುವುದಕ್ಕೆ ದಾರಿದೀಪವಾಗಿದ್ದಾರೆ ಎಂದರು.ಯುಗಯುಗಾಂತರಗಳಿಂದ ಮಾನವೀಯತೆ ನೆಲೆಸಿರುವ ರಾಷ್ಟ್ರ ನಮ್ಮ ಭಾರತ. ಇದು ವಿಭಿನ್ನ ಧರ್ಮ, ಸಮಾಜ, ಸಂಸ್ಕೃತಿ ಮತ್ತು ಭಾಷೆಗಳಿಂದ ಆಶೀರ್ವದಿಸಲ್ಪಟ್ಟಿರುವ ದೇಶವಾಗಿದೆ, ಎಲ್ಲವೂ ಪರಸ್ಪರ ಸೌಹಾರ್ದತೆಯಿಂದ ಪರಸ್ಪರ ಸಂಬಂಧ ಹೊಂದಿದೆ. ಇಡೀ ಜಗತ್ತಿಗೆ "ವಿವಿಧತೆಯಲ್ಲಿ ಏಕತೆ" ಎಂಬ ಸಂದೇಶವನ್ನು ನೀಡುವ ಎಲ್ಲರ ನಡುವೆ ನಾವು ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬೇಕು ಮತ್ತು ನಮ್ಮ ರಾಷ್ಟ್ರೀಯ ಏಕತೆಯ ಬಲವರ್ಧನೆ ಮತ್ತು ಐಕ್ಯಮತ್ಯಕ್ಕಾಗಿ ನಾವು ಶ್ರಮಿಸಬೇಕು. ಕರ್ನಾಟಕದ ಎಲ್ಲಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.