ಬೆಂಗಳೂರು: 2006ರ ನಂತರ ನೇಮಕಾತಿಗೊಂಡ ರಾಜ್ಯ ಸರಕಾರದ ಸುಮಾರು 13 ಸಾವಿರ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರಕಾರವು ಬುಧವಾರ (ಜ.24) ಆದೇಶ ಹೊರಡಿಸಿದೆ.ಮೊದಲಿನಿಂದಲೂ ಇದ್ದ ಡಿಫೈನ್ಡ್ ಪಿಂಚಣಿ ಯೋಜನೆಯನ್ನು ಬದಲಾವಣೆ ಮಾಡಿ 2006ರ ಬಳಿಕ ನೇಮಕವಾದ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯನ್ನು ವಿರೋಧಿಸಿ ಒಂದು ದಶಕಗಳಿಂದ ರಾಜ್ಯ ಸರಕಾರಿ ನೌಕರರು ಹೋರಾಟ ನಡೆಸಿ ಮತ್ತೆ ಹಿಂದಿನ ಯೋಜನೆ ವ್ಯಾಪ್ತಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದರು. ಸದ್ಯ ಸರಕಾರ ಒಂದು ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ.  ಈ ಬಗ್ಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ನೌಕರರು ಇಚ್ಛೆಪಟ್ಟಲ್ಲಿ ಮಾತ್ರ ಒಮ್ಮೆ ಬದಲಾವಣೆಗೆ ಅವಕಾಶ ನೀಡಿದೆ. ಈ ಕುರಿತು ಅರ್ಜಿ ನಮೂನೆಯನ್ನು ಜೂನ್ 30ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ಕುರಿತು ಎಕ್ಸ್‌ ನಲ್ಲಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, "2006 ಎಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಾತಿಗೊಂಡ ರಾಜ್ಯ ಸರಕಾರದ ಸುಮಾರು 13,000 ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಸರಕಾರ ಆದೇಶ ಹೊರಡಿಸಿದೆ" ಎಂದು ತಿಳಿಸಿದ್ದಾರೆ.ಚುನಾವಣೆಗೂ ಪೂರ್ವದಲ್ಲಿ ಎನ್‍ಪಿಎಸ್ ನೌಕರರು ಮುಷ್ಕರ ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.    ಎಲ್ಲ 13,000 ಎನ್‍ಪಿಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ಸಿಎಂ ಅವರು ತಿಳಿಸಿದ್ದಾರೆ.    