ಬೆಂಗಳೂರು: ಸಂಸದ ಅನಂತ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಿಕಿತ್ಸೆ ಕೊಡಿಸಲಿ. ಇಲ್ಲದಿದ್ದರೆ ನಾವೇ ಚಿಕಿತ್ಸೆ ಕೊಡಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.  ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ ಎಂದು ಈಗ ಸಾಬೀತಾಯಿತು. ಬಿಜೆಪಿ ರಾಜ್ಯಾಧ್ಯಕ್ಷರೇ ಅವರ ಮಾತಿಗೆ ನಾವು ಬೆಲೆ ಕೊಡಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆತ ಬಿಜೆಪಿಯೊಳಗಿರುವ ಹುಚ್ಚ, ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದರು.ಜ.31ರೊಳಗೆ ಕಾಂತರಾಜು ವರದಿ ಯನ್ನು ಸರಕಾರ ಸ್ವೀಕಾರ ಮಾಡಲಿದೆಇನ್ನೂ ಜ.31ರೊಳಗೆ ಕಾಂತರಾಜು ವರದಿಯನ್ನು ರಾಜ್ಯ ಸರಕಾರ ಸ್ವೀಕಾರ ಮಾಡಲಿದೆ. ಅಲ್ಲದೆ, ಆಯೋಗದ ಅವಧಿ ಜ.31ರ ವರೆಗೂ ಇದೆ. ಅದರೊಳಗೆ ವರದಿ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದ ಅವರು, ವರದಿಯ ಅಂಶಗಳನ್ನು ನೋಡಿದ ಮೇಲೆ ಚರ್ಚೆ ಮಾಡಬೇಕಾಗಿದೆ. ಅಲ್ಲದೆ, ಇದು ಜಾತಿಗಣತಿ ಅಲ್ಲ. ಇದು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ವರದಿ ಎಂದು ಹೇಳಿದರು.  