PC : X ಮಂಗಳೂರು : ಹಿರಿಯರ 77ನೇ ಆವೃತ್ತಿಯ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ಶುಕ್ರವಾರ ಕೊನೆಗೊಂಡಿದ್ದು, ಆತಿಥೇಯ ಕರ್ನಾಟಕ ಮತ್ತೊಮ್ಮೆ ಚಾಂಪಿಯನ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ.ಕರ್ನಾಟಕ 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 6 ಚಿನ್ನ, 4 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿರುವ ಮಹಾರಾಷ್ಟ್ರ ತಂಡ ಸಮಗ್ರ ರನ್ನರ್ಸ್ ಅಪ್ ಎನಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ 4 ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಅನೀಶ್ ಎಸ್.ಗೌಡ ವೈಯಕ್ತಿಕ ಚಾಂಪಿಯನ್ ಆಗಿ ಆಯ್ಕೆಯಾದರೆ, ಮಹಿಳೆಯರ ವಿಭಾಗದಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿಸಿರುವ ಕರ್ನಾಟಕದ ಹಶಿಕಾ ರಾಮಚಂದ್ರ ಅಗ್ರ ಸ್ಥಾನ ಪಡೆದರು.ಪುರುಷರ 4-100 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕ ಶುಕ್ರವಾರ ನೂತನ ದಾಖಲೆ ನಿರ್ಮಿಸಿತು. ಪೃಥ್ವಿ ಎಂ., ಕಾರ್ತಿಕೇಯನ್ ನಾಯರ್, ಆಕಾಶ್ ಮಣಿ ಹಾಗೂ ಶ್ರೀಹರಿ ನಟರಾಜ್  ಅವರಿದ್ದ ರಿಲೇ ತಂಡವು 3:28.09 ಸೆಕೆಂಡ್‌ನಲ್ಲಿ ಗುರಿ ತಲುಪಿತು. 2023ರಲ್ಲಿ ಕರ್ನಾಟಕವೇ ನಿರ್ಮಿಸಿರುವ ದಾಖಲೆ(3:28.16)ಯನ್ನು ಉತ್ತಮಪಡಿಸಿಕೊಂಡಿತು.ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಉನ್ನಿ ಕೃಷ್ಣನ್, ವಿಕಾಸ್ ಪ್ರಭಾಕರ್, ವಿನಾಯಕ್ ವಿಜಯ್ ಹಾಗೂ ಆನಂದ್ ಎಸ್. 3:28.93 ಸಮಯದೊಂದಿಗೆ ಎರಡನೇ ಸ್ಥಾನ ಪಡೆದರು.ಶಿವಾಂಗಿ ಶರ್ಮಾ, ಅಸ್ತಾ ಚೌಧರಿ, ಕನ್ಯಾ ನಾಯರ್ ಹಾಗೂ ಅವಂತಿಕಾ ಸುಧೀರ್ ಚವಾಣ್ ಮಹಿಳೆಯರ 4-100 ಮೀ. ಫ್ರೀಸ್ಟೈಲ್‌ನಲ್ಲಿ 4:02.24 ಸೆಕೆಂಡ್‌ನಲ್ಲಿ ಗುರಿ ತಲುಪಿ ಮಹಾರಾಷ್ಟ್ರದ ಹಾಲಿ ದಾಖಲೆಯನ್ನು ಮುರಿದರು. 2023ರಲ್ಲಿ ಮಹಾರಾಷ್ಟ್ರವು 4:01.83 ಸಮಯದಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿತ್ತು.ಕರ್ನಾಟಕದ ಶಿರಿನ್, ವಿನಿತಾ ನಯನಾ ಲೋಕನಾಥನ್, ಶಾಲಿನಿ ಆರ್.ದೀಕ್ಷಿತ್ ಹಾಗೂ ಹಶಿಕಾ ರಾಮಚಂದ್ರ(4:02.62)ಎರಡನೇ ಸ್ಥಾನ ಪಡೆದರು.ಮಹಿಳೆಯರ 400 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಕರ್ನಾಟಕದ ತಾನ್ಯಾ ಸುಧಾಕರ್ 5:08.10 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಹಾರಾಷ್ಟ್ರದ ಸಾನ್ವಿ ದೇಶ್ವಾಲ್(5:10.89 ಸೆ.)ಎರಡನೇ ಸ್ಥಾನ ಪಡೆದರು.ಪುರುಷರ 400 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ರಾಜಸ್ಥಾನದ ಯುಗ್ ಚೆಲಾನಿ(4:36.39) ಮೊದಲ ಸ್ಥಾನ ಪಡೆದರೆ, ಆಂಧ್ರಪ್ರದೇಶದ ಎಂ.ಟಿ. ಸೋವದೇವ್(4:36.44)ಎರಡನೇ ಸ್ಥಾನ ಪಡೆದರು.200 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್ ಎಸ್. ಗೌಡ(ಕರ್ನಾಟಕ) 1:52.09 ಸಮಯದೊಂದಿಗೆ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಆನಂದ್ ಎಸ್.(1:53.1)2ನೇ ಸ್ಥಾನ ಪಡೆದರು. ಪುರುಷರ 200 ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ತಮಿಳುನಾಡಿನ ನಿಥಿಕ ನಥೆಲ್ಲಾ (2:03.47)ಹಾಗೂ ಮಹಾರಾಷ್ಟ್ರದ ರಿಷಭ್ ಅನುಪಮ್(2:04.03)ಮೊದಲೆರಡು ಸ್ಥಾನ ಪಡೆದರು.100 ಮೀ. ಬ್ರೀಸ್ಟ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ವಿದಿತ್ ಎಸ್.ಶಂಕರ್(1:02.75)ಅಗ್ರ ಸ್ಥಾನ ಪಡೆದರು. ತಮಿಳುನಾಡಿನ ದನುಶ್ ಸುರೇಶ್(1:03.27) ಎರಡನೇ ಸ್ಥಾನ ಪಡೆದರು.200 ಮೀ. ಫ್ರ್ರೀಸ್ಟೈಲ್‌ನಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ(2:06.9)ಮೊದಲ ಸ್ಥಾನ ಪಡೆದರೆ, ಮಹಾರಾಷ್ಟ್ರದ ಅದಿತಿ ಎಸ್.ಹೆಗ್ಡೆ(2:08.67)2ನೇ ಸ್ಥಾನ ಪಡೆದರು.