ಬೆಂಗಳೂರು: ಭೀಕರ ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ರಾಜ್ಯ ಸರ್ಕಾರದ ಯೋಜನೆಗಳೇ ಹೊರತು, ಇವರು ಕುರುಡಾಗಿ ಆರಾಧಿಸುವ ಮೋದಿಯವರಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.ಈ ಸಂಬಂಧ ʼಎಕ್ಸ್‌ʼ ಸರಣಿ ಪೋಸ್ಟ್‌ ಹಂಚಿಕೊಂಡಿರುವ ಅವರು, ʼವಿಪಕ್ಷ ನಾಯಕ ಅಶೋಕ್, ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ ಎಂದು ಹೇಳಿರುವುದಕ್ಕೆ ನಾಚಿಕೆಪಡಬೇಕು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಬರದಿಂದ ತತ್ತರಿಸಿರುವ ರೈತರಿಗೆ 2 ಸಾವಿರ ರೂ. ಪರಿಹಾರ ನೀಡುವ ಕೆಲಸ ಮಾಡುತ್ತಿದೆ. ರೈತರ ನೆರವಿಗಾಗಿ ಕೃಷಿ ಭಾಗ್ಯ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ ಎಂದು ಹೇಳುವ ಧೈರ್ಯ ಅಶೋಕ್‌ರವರಿಗಿದೆಯೇʼ ಎಂದು ಪ್ರಶ್ನಿಸಿದ್ದಾರೆ."ಅಶೋಕ್‌ರವರೆ, ನಾವು ಕೇಂದ್ರದ ಬಳಿ ಬಿಟ್ಟಿ ಕೊಡಿ ಎಂದು ಅಂಗಲಾಚುತ್ತಿಲ್ಲ. ನಮಗೆ ಬರಬೇಕಾದ ತೆರಿಗೆ ಅನುದಾನದ ಪಾಲು, ಬರ ಪರಿಹಾರದ ಪಾಲನ್ನು ಅಧಿಕಾರಯುತವಾಗಿ ಕೇಳುತ್ತಿದ್ದೇವೆ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಕಳೆದ‌ ಒಂದು ವಾರದಿಂದ ಅನೇಕ ದಿನಪತ್ರಿಕೆಗಳಲ್ಲಿ ಸರಣಿ ವರದಿ ಪ್ರಕಟವಾಗಿದೆ. ಒಂದು ವೇಳೆ ಆ ವರದಿಗಳನ್ನು ನೀವು ಓದಿಲ್ಲವಾದರೆ, ಸಮಯಾವಕಾಶ ಮಾಡಿಕೊಂಡು ಓದಿ. ಆಗ 'ಗುಳೆ ಭಾಗ್ಯ'ದ ಕೊಡುಗೆ ಯಾರದ್ದೆಂದು ತಿಳಿಯಲಿದೆ" ಎಂದು ಟೀಕಿಸಿದ್ದಾರೆ.ʼಅಶೋಕ್‌ರವರೆ, ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತೆ ನಮ್ಮ ಮುಂದೆ ನಿಮ್ಮ ಪೌರುಷ ತೋರಿಸಬೇಡಿ. ವಿಪಕ್ಷ ನಾಯಕನಂತಹ‌ ಜವಬ್ಧಾರಿ ಸ್ಥಾನದಲ್ಲಿದ್ದೀರಿ. ನಿಮಗೇನಾದರೂ ರಾಜ್ಯದ ರೈತರ ಬಗ್ಗೆ ಅನುಕಂಪ, ಕರುಣೆ, ಕಾಳಜಿಯಿದ್ದರೆ ಕೇಂದ್ರದಿಂದ ನಿಯಮಾನುಸಾರ ನಮಗೆ ಬರಬೇಕಾದ ಬರಪರಿಹಾರ ಕೊಡಲು ಮೋದಿಯವರಿಗೆ ಹೇಳಿ. ಇಲ್ಲವಾದರೆ ಮೋದಿಯವರ ಎದುರು ಮಾತಾಡಲು ನಿಮಗೆ ಧೈರ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ ಎಂದು ಲೇವಡಿ ಮಾಡಿದ್ದಾರೆ.   