ಸಾಂದರ್ಭಿಕ ಚಿತ್ರಚಿಕ್ಕಮಗಳೂರು: 2017ರಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಮೇಲೆ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲಿ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿಗಳಿಗೆ ಹಾನಿ ಮಾಡಿದ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು 6ವರ್ಷಗಳ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಪ್ರಕರಣದ 14 ಮಂದಿ ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.ಪ್ರಕರಣದ ಎ1 ಆರೋಪಿಯಾಗಿರುವ ಸಂಘಪರಿವಾರದ ಕಾರ್ಯಕರ್ತ ತುಡುಕೂರು ಮಂಜು ಸೇರಿದಂತೆ 14 ಮಂದಿ ಆರೋಪಿಗಳು 2017ರ ದತ್ತಜಯಂತಿ ವೇಳೆ ಬಾಬಾ ಬುಡನ್ ದರ್ಗಾದ ಆವರಣದಲ್ಲಿದ್ದ ಗೋರಿಗಳಿರುವ ಸ್ಥಳಕ್ಕೆ ನುಗ್ಗಿ ಕೆಲ ಗೋರಿಗಳಿಗೆ ಹಾನಿ ಮಾಡಿದ್ದರು. ಈ ಘಟನೆ ಸಂಬಂಧ 14 ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನೂ ಕೈಗೊಂಡಿದ್ದರು. ಆದರೆ ತನಿಖೆ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಅಂದು ಸಲ್ಲಿಸಿರಲಿಲ್ಲ. ಆದರೆ 6 ವರ್ಷಗಳು ಕಳೆದ ಬಳಿಕ ಹಾಲಿ ರಾಜ್ಯ ಸರಕಾರ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಡಿ.6ರಂದು ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.  ಸದ್ಯ ಈ ಪಕ್ರರಣ ಸಂಬಂಧ ಎ1 ಆರೋಪಿ ತುಡುಕೂರು ಮಂಜು ಹಾಗೂ ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಮಂದಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಜ.8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‍ನಲ್ಲಿ ಸೂಚನೆ ನೀಡಲಾಗಿದೆ.  ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಂಘಪರಿವಾರದವರ ಮೇಲಿದ್ದ ಅನೇಕ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಬಾಬಾ ಬುಡನ್ ದರ್ಗಾ ಆವರಣದಲ್ಲಿದ್ದ ಗೋರಿಗಳಿಗೆ ಹಾನಿ ಪ್ರಕರಣವನ್ನೂ ಸರಕಾರ ಹಿಂಪಡೆಯಲು ಮುಂದಾಗಿತ್ತು, ಆದರೆ ಪೊಲೀಸರು ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಕಾರಣದಿಂದ ಪ್ರಕರಣ ರದ್ದಾಗಿರಲಿಲ್ಲ ಎಂದು ತಿಳಿದು ಬಂದಿದೆ.2017ರಲ್ಲಿ ದತ್ತಜಯಂತಿ ಸಂದರ್ಭ ಗೋರಿಗಳಿಗೆ ಹಾನಿ ಮಾಡಿದ ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರಾದರೂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರಲಿಲ್ಲ. ಹಿಂದಿನ ಬಿಜೆಪಿ ಸರಕಾರ ಈ ಪ್ರಕರಣವನ್ನು ಹಿಂಪಡೆಯಲು ಮುಂದಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದ ಪರಿಣಾಮ ಪ್ರಕರಣ ರದ್ದಾಗಿರಲಿಲ್ಲ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಈ ಪ್ರಕರಣದ ದೋಷಾರೋಪಣಾ ಪಟ್ಟಿ ಸಲ್ಲಿಸಲು ಅನುಮತಿ ನೀಡಿದ್ದರಿಂದ ಕಳೆದ ಡಿಸೆಂಬರ್ ತಿಂಗಳಲ್ಲಿ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನ್ಯಾಯಾಲಯ 14 ಮಂದಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಸರಕಾರ ಹಾಗೂ ಪೊಲೀಸರು ದುರುದ್ದೇಶದಿಂದ ಈ ಪ್ರಕರಣವನ್ನು ರೀಓಪನ್ ಮಾಡಿದ್ದಾರೆ. ಪ್ರಕರಣ ರದ್ದತಿಗಾಗಿ ಹೈಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು.   - ಸುಧಾಕರ್, ವಕೀಲಗೋರಿಗಳಿಗೆ ಹಾನಿ ಮಾಡಿದ ಹಳೆಯ ಪ್ರಕರಣದ ಬಗ್ಗೆ ನ್ಯಾಯಾಲಯದ ನೋಟಿಸ್ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಯಾವುದೇ ಹಳೇ ಪ್ರಕರಣಗಳನ್ನು ರೀ ಓಪನ್ ಮಾಡಿಲ್ಲ. ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.  