ಚಿಕ್ಕಮಗಳೂರು: ಶಾಲಾ ಬಸ್ ಡ್ರೈವರ್ ಪ್ರೇಮದಾಟಕ್ಕೆ ಸಿಲುಕಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ ಘಟನೆ ಕಡೂರು ಅಜ್ಜಂಪುರ ತಾಲೂಕಿನ ಬಂಕನಕಟ್ಟೆ ಗ್ರಾಮದಲ್ಲಿ ರವಿವಾರ ನಡೆದಿದ್ದು,  ವಿದ್ಯಾರ್ಥಿನಿಯೊಂದಿಗೆ ಡ್ರೈವರ್ ಕೂಡ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಜಿಲ್ಲೆಯ ಅಜ್ಜಂಪುರ ತಾಲೂಕು ಬಂಕನಕಟ್ಟೆ ಸಮೀಪ ಘಟನೆ ನಡೆದಿದ್ದು, ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ್ (38) ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅದೇ ಶಾಲೆಯ ಬಸ್ ಡ್ರೈವರ್ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.ಬಸ್ ಡ್ರೈವರ್ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ವಿದ್ಯಾರ್ಥಿನಿ ರಾತ್ರಿ ಸ್ನೇಹಿತೆಯರ ಜೊತೆ ನ್ಯೂ ಇಯರ್ ಪಾರ್ಟಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದಳು ಎಂದು ತಿಳಿದು ಬಂದಿದೆ. ಈ ವೇಳೆ ಸಂತೋಷ್ ವಿದ್ಯಾರ್ಥಿನಿಯನ್ನು ಕರೆದೊಯ್ದು ಮಧ್ಯರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಶಾಲಾ ಡ್ರೈವರ್ ತಮ್ಮ ಮಗಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ವಿಚಾರದ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಅಜ್ಜಂಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಹತ್ಯೆ ಮಾಡಲಾಗಿದೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.  