ಬೆಂಗಳೂರು: ಸೇವಾ ಖಾಯಮಾತಿ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಮನವೊಲಿಸಲು ಪ್ರಯತ್ನಿಸಿರುವ ರಾಜ್ಯ ಸರಕಾರವು, ಅತಿಥಿ ಉಪನ್ಯಾಸಕರ ಗೌರವ ಧನವನ್ನು 5 ಸಾವಿರ ರೂ.ಹೆಚ್ಚಿಸಲು ನಿರ್ಧರಿಸಿದೆ.  ಶುಕ್ರವಾರ ವಿಕಾಸಸೌಧದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ, ಸಮಸ್ಯೆಗಳ ಕುರಿತಂತೆ ಅವರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಚರ್ಚೆಯ ನಂತರ ಸರಕಾರದ ನಿರ್ಧಾರಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.  ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಗೌರವಧನಕ್ಕೆ 5 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಈ ಹೆಚ್ಚುವರಿ ಮೊತ್ತವನ್ನು ಒದಗಿಸಲು ಸರಕಾರಕ್ಕೆ ವಾರ್ಷಿಕ ಅಂದಾಜು 84 ಕೋಟಿ ರೂ.ಗಳ ಅನುದಾನ ಅವಶ್ಯವಿರುತ್ತದೆ ಎಂದು ಅವರು ಹೇಳಿದರು.  ಅತಿಥಿ ಉಪನ್ಯಾಸಕರಿಗೆ ರಜೆಯ ಒಂದು ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು, 15 ರಿಂದ 19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಸುಧಾಕರ್ ಹೇಳಿದರು.  ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಅರ್ಜಿಗಳನ್ನು ಕರೆಯುವುದು, ದಾಖಲೆಗಳ ದೃಢೀಕರಣ ಮಾಡುವುದರ ಬದಲಾಗಿ, ಹಿಂದಿನ ವರ್ಷ ಸಲ್ಲಿಸಿರುವ ಅರ್ಜಿಯನ್ನೆ ನಂತರದ ವರ್ಷಗಳಲ್ಲಿನ ಆಯ್ಕೆಗೂ ಪರಿಗಣಿಸುವ ಕುರಿತು ಚರ್ಚೆ ನಡೆಸಲಾಗಿದೆ. ಇದಕ್ಕಾಗಿ, ಆಯ್ಕೆಯಾದ ಅತಿಥಿ ಉಪನ್ಯಾಸಕರ ದಾಖಲೆಗಳ ಸೆಂಟ್ರಲೈಜ್ಡ್ ಡಾಟಾ ಬೇಸ್ ಅನ್ನು ಸೃಷ್ಠಿಸಿ, ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.  ಕಾಲೇಜಿನ ಎಲ್ಲ ಪ್ರಾಂಶುಪಾಲರು ಪೂರ್ಣಕಾಲಿಕ ಮತ್ತು ಅತಿಥಿ ಉಪನ್ಯಾಸಕರ ಮಧ್ಯೆ ಯಾವುದೇ ತಾರತಮ್ಯವನ್ನು ಅನುಸರಿಸದಂತೆ ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವಂತೆ ಈಗಾಗಲೆ ಸೂಚನೆಗಳನ್ನು ನೀಡಲಾಗಿದೆ. ಸುಪ್ರೀಂಕೋರ್ಟ್ ಹಾಗೂ ಕೆಎಟಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇಲ್ಲ ಎಂದು ಅವರು ತಿಳಿಸಿದರು.  ಆದುದರಿಂದ, ಕಾಲೇಜು ಶಿಕ್ಷಣ ಇಲಾಖೆಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಪಾಲಿಟೆಕ್ನಿಕ್ ಉಪನ್ಯಾಸಕರ ಮುಂದಿನ ನೇಮಕಾತಿ ವೇಳೆ ಕನಿಷ್ಠ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಶೇ.1 ರಂತೆ ಗರಿಷ್ಠ ಶೇ.5ರಷ್ಟು ಕೃಪಾಂಕ ನೀಡುವ ಅವಕಾಶವನ್ನು ವಿಶೇಷ ನಿಯಮಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.  10 ರಿಂದ 15 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ ಇವರಿಗೆ ಭದ್ರತಾ ರೂಪದಲ್ಲಿ  ಸೌಲಭ್ಯವನ್ನು ಅವರು ಸಲ್ಲಿಸಿರುವ ಸೇವಾ ಅವಧಿ ಪರಿಗಣಿಸಿ ವಾರ್ಷಿಕ 50 ಸಾವಿರ ರೂ.ಗಳಂತೆ (ಉದಾಹರಣೆಗೆ 10 ವರ್ಷ ಸೇವೆ ಸಲ್ಲಿಸಿದಲ್ಲಿ 5 ಲಕ್ಷ ರೂ.ಗಳು)ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ಸುಧಾಕರ್ ಹೇಳಿದರು.ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಠಿ ಯಿಂದ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ 400 ರೂ.ಸ್ವೀಕರಿಸಿ ಅಷ್ಟೇ ಮೊತ್ತದ ವಂತಿಗೆಯನ್ನು ಸರಕಾರದಿಂದ ಭರಿಸಿ ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ ಅಂದಾಜು 68 ಕೋಟಿ ರೂ.ಗಳ ಅನುದಾನ ಅವಶ್ಯವಿರುತ್ತದೆ ಎಂದು ಅವರು ಹೇಳಿದರು.  ಅತಿಥಿ ಉಪನ್ಯಾಸಕರ ಬೇಡಿಕೆ, ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸರಕಾರವು ಇಚ್ಛಾಶಕ್ತಿ, ಬದ್ಧತೆಯಿಂದ ಈ ತೀರ್ಮಾನಗಳನ್ನು ಕೈಗೊಂಡಿದೆ. ಆದುದರಿಂದ, ಸರಕಾರದ ತೀರ್ಮಾನವನ್ನು ಒಪ್ಪಿ, ಜ.1ರಿಂದ ಎಲ್ಲ ಅತಿಥಿ ಉಪನ್ಯಾಸಕರು ತರಗತಿಗಳಿಗೆ ಹಾಜರಾಗಬೇಕು ಎಂದು ಅವರು ಹೇಳಿದರು.  ಒಂದು ವೇಳೆ ತರಗತಿಗಳಿಗೆ ಗೈರು ಹಾಜರಾದಲ್ಲಿ ಸರಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಯಮಾನುಸಾರ ಮುಂದಿನ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸುಧಾಕರ್ ಹೇಳಿದರು.  ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುತ್ತೇವೆ. ಈಗಾಗಲೇ ಅತಿಥಿ ಉನ್ಯಾಸಕರ ಹುದ್ದೆಗೆ 30 ಸಾವಿರ ಜನ ಅರ್ಜಿ ಹಾಕಿದ್ದಾರೆ. ಕೌನ್ಸಿಲಿಂಗ್ ಮೂಲಕ 10,300 ಜನ ಆಯ್ಕೆ ಆಗಿದ್ದಾರೆ ಎಂದು ಅವರು ಹೇಳಿದರು.  ಮುಷ್ಕರ ಮುಂದುವರಿಸಲು ನಿರ್ಧಾರ: ರಾಜ್ಯ ಸರಕಾರವು ವೇತನ ಪರಿಷ್ಕರಣೆ, ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ, ಆರೋಗ್ಯ ವಿಮೆ ನೀಡಲು ಸಮ್ಮತಿಸಿದ್ದರೂ ಅತಿಥಿ ಉಪನ್ಯಾಸಕರು ತಮ್ಮ ಮುಷ್ಕರದಿಂದ ಹಿಂದಕ್ಕೆ ಸರಿಯದಿರಲು ನಿರ್ಧರಿಸಿದ್ದಾರೆ. ಸೇವೆ ಖಾಯಮಾತಿ ಮಾಡುವವರೆಗೆ ನಮ್ಮ ಮುಷ್ಕರ ಕೈ ಬಿಡುವುದಿಲ್ಲ. ಜ.1ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಿದ್ದೇವೆ ಎಂದು ಅತಿಥಿ ಉಪನ್ಯಾಸಕರು ಹೇಳಿದ್ದಾರೆ.  