ಸಚಿವ ಶಿವರಾಜ್ ತಂಗಡಗಿಬೆಂಗಳೂರು: 2022-23 ಹಾಗೂ 2023-24ನೆ ಸಾಲಿನ ಮೂರು ವಾರ್ಷಿಕ ಪ್ರಶಸ್ತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಘೋಷಿಸಿದ್ದಾರೆ.ಬುಧವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ವಿ.ಟಿ.ಕಾಳೆ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಅನೇಕ ಸಭೆಗಳನ್ನು ನಡೆಸಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ ಎಂದರು.ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: 2022-23ನೆ ಸಾಲಿಗೆ ಮೈಸೂರಿನ ಜಿ.ಎಲ್.ಎನ್.ಸಿಂಹ, 2023-24ನೆ ಸಾಲಿಗೆ ಕಲಬುರಗಿಯ ಬಸವರಾಜ ಎಲ್.ಜಾನೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.ಜಕಣಾಚಾರಿ ಪ್ರಶಸ್ತಿ: 2022-23ನೆ ಸಾಲಿಗೆ ಕಲಬುರಗಿಯ ಮಹದೇವಪ್ಪ ಎಸ್., 2023-24ನೆ ಸಾಲಿಗೆ ಚಿಕ್ಕಮಗಳೂರು ಜಿಲ್ಲೆಯ ಎಸ್.ಪಿ.ಜಯಣ್ಣಾಚಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.ಜಾನಪದ ಶ್ರೀ ಪ್ರಶಸ್ತಿ: 2022-23ನೆ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅರುವ ಕೊರಗಪ್ಪ ಶೆಟ್ಟಿ(ಯಕ್ಷಗಾನ), ಬೀದರ್ ಜಿಲ್ಲೆಯ ಕಲ್ಲಪ್ಪ ಮಿರ್ಜಾಪುರ(ರಿವಾಯತ್ ಪದಗಳು), 2023-24ನೆ ಸಾಲಿಗೆ ಚಿತ್ರದುರ್ಗ ಜಿಲ್ಲೆಯ ಹಲಗೆ ದುರ್ಗಮ್ಮ(ಹಲಗೆ ವಾದನ-ಲಾವಣಿ ಪದಗಳು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.ಜಕಣಾಚಾರಿ ಪ್ರಶಸ್ತಿಗಳನ್ನು ಜ.1ರಂದು ಆಯೋಜಿಸಲಾಗುತ್ತಿರುವ ವಿಶ್ವಕರ್ಮ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಂದು ಪ್ರದಾನ ಮಾಡಲಾಗುವುದು. ವರ್ಣಶಿಲ್ಪಿ ವೆಂಕಪಟ್ಟ ಪ್ರಶಸ್ತಿ ಹಾಗೂ ಜಾನಪದ ಶ್ರೀ ಪ್ರಶಸ್ತಿಗಳನ್ನು ಜನವರಿ ಕೊನೆ ವಾರದಲ್ಲಿ ಅಥವಾ ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.