ಬೆಂಗಳೂರು: ಬಿಜೆಪಿಗರು ಕರ್ನಾಟಕವನ್ನು ಸೋಮಾಲಿಯಾದ ಕಡಲುಗಳ್ಳರನ್ನೂ ಮೀರಿಸುವಂತೆ ಲೂಟಿ ಹೊಡೆದಿದ್ದಾರೆಯೇ? ಬಿಜೆಪಿಯ ಒಳಜಗಳದಲ್ಲಿ ಬಿಜೆಪಿಗರ ಬಾಯಿಯಿಂದಲೇ ಅವೆಲ್ಲವೂ ಬಯಲಾಗುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.ಕೊರೊನಾ ವೇಳೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 40 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪವನ್ನು ಮುಂದಿಟ್ಟು ಟ್ವೀಟ್‌ ಮಾಡಿರುವ ಕಾಂಗ್ರೆಸ್, ಕೋವಿಡ್ ಕಾಲದಲ್ಲಿ ಶ್ಯಾಡೋ ಸಿಎಂ ಆಗಿದ್ದ ಬಿ.ವೈ ವಿಜಯೇಂದ್ರ ಅವರೇ, 45 ರೂಪಾಯಿಯ ಮಾಸ್ಕ್‌ ಗೆ 480 ರೂಪಾಯಿಯಾಗಿದ್ದು ಹೇಗೆ? ಹೆಚ್ಚುವರಿ 435 ರೂಪಾಯಿ‌ ವಿಜಯೇಂದ್ರ ಸರ್ವಿಸ್‌ ಟ್ಯಾಕ್ಸ್ ಗೆ ಸೇರಿದ ಹಣವೇ? ಎಂದು ವ್ಯಂಗ್ಯವಾಡಿದೆ. 40ಸಾವಿರ ಕೋಟಿ ರೂಪಾಯಿಯ ಯತ್ನಾಳ್ ಆರೋಪ ಸುಳ್ಳು ಎಂದಾದರೆ ಬಿಜೆಪಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುವುದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 