ಬೆಳಗಾವಿ : ಸಿಎಂ ರೇಸ್‍ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಅವರೇ ಮುಂದುವರಿಯುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಬಿಜೆಪಿಯವರಿಗೆ ಸ್ಥಿರ ಸರಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರಕಾರ ಅಸ್ಥಿರಗೊಳಿಸುವುದು, ಬೀಳಿಸುವುದು, ಒಡೆಯುವುದು, ಆಪರೇಷನ್ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸರಕಾರ ಬೀಳಿಸುವುದು ಒಂದೇ ಅವರ ಕಾರ್ಯಕ್ರಮ. ಬಿಜೆಪಿಯವರ ಸಾಮಾಜಿಕ ಜಾಲತಾಣದಲ್ಲಿ ಏನೇನೂ ಹಾಕಿರುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ದೇಶದಲ್ಲೆ ನಂಬರ್ ಒನ್ ಅಲ್ಲವಾ?" ಎಂದು ಟೀಕಿಸಿದರು.  ಕೋರ್ಟ್‍ನಲ್ಲಿ ಯಾವುದೇ ರೀತಿಯ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ, ತಪ್ಪೋ ಅಷ್ಟೆ ಇರುವುದು. ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅಧಿಕಾರದ ದುರುಪಯೋಗ ಮಾಡಿಲ್ಲ ಎಂದು ಅವರು ತಿಳಿಸಿದರು.  ರಾಜಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದಾರೆ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಮೇಲೆ ಇರುವ ಭ್ರಷ್ಟಚಾರದ ಕುರಿತ ಅರ್ಜಿ ರಾಜ್ಯಪಾಲರ ಕಚೇರಿಯಲ್ಲಿ ತಿಂಗಳುಗಟ್ಟಲೆ ಹಾಗೆಯೇ ಬಿದ್ದಿದೆ. ರಾಜ್ಯಪಾಲರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲಿ ರಾಜ್ಯಪಾಲರ ಮನಸ್ಥಿತಿ ಮತ್ತು ಪಕ್ಷಪಾತ ಧೋರಣೆ ಗೊತ್ತಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.  