ಸಾಂದರ್ಭಿಕ ಚಿತ್ರಬೆಂಗಳೂರು : ಅಧಿಕಾರ ಪ್ರಭಾವ ಬಳಸಿ ಉದ್ಯಮಿಯೊಬ್ಬರ ಕಂಪೆನಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಅಕ್ರಮವಾಗಿ 1.5 ಕೋಟಿ ರೂ. ಸುಲಿಗೆ ಮಾಡಿದ್ದ ಆರೋಪದಡಿ ಓರ್ವ ಮಹಿಳೆ ಸೇರಿ ನಾಲ್ವರು ಜಿಎಸ್‍ಟಿ ಅಧಿಕಾರಿಗಳನ್ನು ಇಲ್ಲಿನ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.  ಜೀವನ್ ಭೀಮಾನಗರದ ಜಿ.ಎಂ.ಪಾಳ್ಯದಲ್ಲಿ ನೆಲೆಸಿರುವ ಉದ್ಯಮಿ ಕೇಶವ್ ತಕ್ ಎಂಬವರು ನೀಡಿದ ದೂರಿನನ್ವಯ ಬೆಂಗಳೂರು ಜಿಎಸ್‍ಟಿ ವಿಭಾಗದಲ್ಲಿ ಗುಪ್ತಚರ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್, ಮನೋಜ್, ನಾಗೇಶ್ ಬಾಬು ಹಾಗೂ ಸೋನಾಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  1.50 ಕೋಟಿ ರೂ. ಹಣ ವಸೂಲಿಯ ನೈಜತೆ ಬಗ್ಗೆ ಅರಿಯಲು ಉದ್ಯಮಿ ಪರಿಶೀಲಿಸಿದಾಗ ಜಿಎಸ್‍ಟಿ ಅಧಿಕಾರಿಗಳೇ ಹಣ ಸುಲಿಗೆ ಮಾಡಿರುವುದು ಗೊತ್ತಾಗಿದೆ. ಆದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.  ದೂರಿನ ವಿವರ: ಜೀವನ್ ಭೀಮಾನಗರದಲ್ಲಿ ಮೆಕ್ಸೊ ಸಲ್ಯೂಷನ್ ಪ್ರೈವೇಟ್ ಕಂಪೆನಿ ನಡೆಸುತ್ತಿದ್ದ ಕೇಶವ್ ತಕ್ ಮನೆಗೆ ಆ.31ರಂದು ಆರೋಪಿಗಳು ಜಾರಿ ನಿರ್ದೇಶನಾಲಯ(ಈ.ಡಿ.) ಹಾಗೂ ಜಿಎಸ್‍ಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಬಂದಿದ್ದಾರೆ. ಏಕಾಏಕಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಪಡಿಸಿಕೊಂಡು ಅಕ್ರಮವಾಗಿ ಕಂಪೆನಿ ನಡೆಸುತ್ತಿದ್ದೀರಾ ಎಂದು ಆರೋಪಿಸಿ ಕೇಶವ್ ಮನೆಯಲ್ಲಿದ್ದ ಪವನ್, ಮುಖೇಶ್, ರಾಕೇಶ್ ಎಂಬವರನ್ನು ಅವರನ್ನು ಬಲವಂತವಾಗಿ ಎಳೆದುಕೊಂಡು ಎರಡು ಕಾರಿನಲ್ಲಿ ಕೂರಿಸಿದ್ದರು.  ಕಚೇರಿ ವಿಳಾಸಕ್ಕೆ ಕರೆತಂದು ಹಲ್ಲೆ ಮಾಡಿ ಪ್ರತ್ಯೇಕ ಕೊಠಡಿಯಲ್ಲಿ ಕೂಡಿಹಾಕಿದ್ದರು. ಹಿರಿಯ ಜಿಎಸ್‍ಟಿ ಅಧಿಕಾರಿ ಎಂದು ಪರಿಚಯಿಸಿಕೊಂಡ ಮನೋಜ್, ಇಂದಿರಾನಗರಕ್ಕೆ ಕೇಶವ್ ತಕ್‍ನನ್ನು ಕರೆದೊಯ್ದು ಸ್ನೇಹಿತ ರೋಷನ್ ಜೈನ್‍ಗೆ ವಾಟ್ಸಪ್ ಕರೆ ಮಾಡಿಸಿ 3 ಕೋಟಿ ರೂ. ತರುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದರು. ಸ್ನೇಹಿತನಿಗೆ 3 ಕೋಟಿ ರೂ. ಒಗ್ಗೂಡಿಸಲು ಸಾಧ್ಯವಾಗಿರಲಿಲ್ಲ. ಸೆ.1ರಂದು 1.50 ಕೋಟಿ ರೂ.ಹಣ ಹೊಂದಿಸಿದ್ದ. ಆರೋಪಿತ ಅಧಿಕಾರಿಗಳು 1.50 ಕೋಟಿ ರೂ. ಹಣ ಪಡೆದು ಪರಾರಿಯಾಗಿದ್ದರು ಎಂದು ದೂರಿನಲ್ಲಿ ಉದ್ಯಮಿ ವಿವರಿಸಿದ್ದಾರೆ.  