ಬೆಳಗಾವಿ: ರಾಜ್ಯ ವ್ಯಾಪಿ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಖಾಲಿ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ʼಬೀಟ್ ಸಿಸ್ಟಂʼ ಜಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.  ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಜಾಗಗಳ ರಕ್ಷಣೆಗೆ ಸರಕಾರ ಮುಂದಾಗಿದೆ. ಈ ಸರಕಾರಿ ದಾಖಲೆಗಳಲ್ಲಿರುವ ಎಲ್ಲ ಸರಕಾರಿ ಜಮೀನಿನ ವಿವರಗಳನ್ನೂ ಈಗಾಗಲೇ ಆಪ್‍ಗೆ ಅಪ್ಲೋಡ್ ಮಾಡಲಾಗಿದೆ. ಅಲ್ಲದೆ, ಮೊಬೈಲ್ ಆ್ಯಪ್ ಮೂಲಕ ಖಾಲಿ ಜಾಗಗಳ ಜಿಪಿಎಸ್ ಲೋಕೇಷನ್ ಮಾರ್ಕ್ ಮಾಡಿ, ಬೌಂಡರಿ ಫಿಕ್ಸ್ ಮಾಡಲಾಗಿದೆ ಎಂದರು.  ಒತ್ತುವರಿ ಯಾಗಿರುವುದು ಕಂಡುಬಂದರೆ ಕೂಡಲೇ ಸಂಬಂಧ ಪಟ್ಟ ತಹಶೀಲ್ದಾರ್ ತೆರವುಗೊಳಿಸಬೇಕು. ʼಬೀಟ್ ಸಿಸ್ಟಂʼ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳು ಕಡ್ಡಾಯ ಸ್ಥಳಕ್ಕೇ ತೆರಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.  ಇನ್ನೂ, ಭೂ ಮಾಫಿಯಾ ಜೊತೆಗೆ ಕೈಜೋಡಿಸಿ ಸರಕಾರಿ ಜಮೀನಿನ ಅಕ್ರಮ ಪರಭಾರೆಗೆ ಸಹಕರಿಸಿದ ಎಲ್ಲ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಅಲ್ಲದೆ, ಸರಕಾರಿ ಜಮೀನನ್ನೂ ವಶಕ್ಕೆ ಪಡೆಯುವ ಕೆಲಸ ಆಂದೋಲನ ಮಾದರಿಯಲ್ಲಿ ಆರಂಭಿಸಲಾಗಿದೆ ಎಂದ ಅವರು, ಸರಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬೆಂಗಳೂರಿನ ಉಪವಿಭಾಗಾಧಿಕಾರಿ ವಿರುದ್ಧ ಎರಡು ಎಫ್‍ಐಆರ್ ಮಾಡಲಾಗಿದೆ. ಆನೇಕಲ್ ತಹಶೀಲ್ದಾರ್ ಕೆಆರ್ ಪುರ ತಹಶೀಲ್ದಾರ್ ಹಾಗೂ ಯಲಹಂಕ ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಪ್ರಕರಣದಲ್ಲೂ ಎಫ್‍ಐಆರ್ ಜೊತೆಗೆ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿ ವಿಚಾರಣೆ ಕೈಗೊಳ್ಳಲಾಗಿದೆ ಎಂದರು.  