ಬೆಳಗಾವಿ: ರಾಜ್ಯಾದ್ಯಂತ ಬಹುತೇಕ ಕಲ್ಲು ಗಣಿಗಾರಿಕೆಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದು, 6ಸಾವಿರ ಕೋಟಿ ರೂ.ದಂಡ ಬಾಕಿ ಉಳಿಸಿಕೊಂಡಿವೆ. ಶೀಘ್ರದಲ್ಲಿ ಬಾಕಿ ದಂಡ ವಸೂಲಿ ಮಾಡಲಾಗುವುದು ಹಾಗೂ ಸಕ್ರಮ ಕಲ್ಲು ಗಣಿಗಾರಿಕೆ ಕಾನೂನು ಪಾರದರ್ಶಕತೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.  ಮಂಗಳವಾರ ಪರಿಷತ್ತಿನ ಪಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು,  ಕಳೆದ ಮೂರು ವರ್ಷದಲ್ಲಿ ಅಧೀಕೃತ ಪರವಾನಗಿ ಇಲ್ಲದೆ ಕಲ್ಲು ಸಾಗಾಣೆ ಮಾಡಿದ ಆರೋಪದ ಮೇಲೆ 485 ಪ್ರಕರಣಗಳನ್ನು ದಾಖಲಿಸಿದ್ದು, 2,060 ಕೋಟಿ ರೂ. ದಂಡ ವಿಧಿಸಲಾಗಿದೆ. ಈವರೆಗೆ ಒಟ್ಟಾರೆಯಾಗಿ ಅಕ್ರಮ ಕಲ್ಲುಗಣಿಗಳಿಂದ ರಾಜ್ಯಕ್ಕೆ ಒಟ್ಟು 6,000 ಕೋಟಿ ರೂ. ದಂಡ ಬಾಕಿ ಇದೆ ಎಂದರು.  ಕಳೆದ ಸರಕಾರಗಳು ಜನರಿಗೆ ಜಲ್ಲಿ ಮತ್ತು ಕಲ್ಲುಗಳು ಅಗತ್ಯ ಇದೆ ಎಂಬ ಕಾರಣಕ್ಕೆ ದಂಡ ವಸೂಲಿಗೆ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಜನರ ಅವಶ್ಯಕತೆಗೆ ತಕ್ಕಂತೆ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಕಾಂಗ್ರೆಸ್ ಸರಕಾರ ಇಂತಹ ಬಾಕಿ ಹಣ ವಸೂಲಾತಿಗೆ ಕ್ರಮ ತೆಗೆದುಕೊಳ್ಳುವ ಸಂಬಂಧ ಈವರೆಗೆ ಎರಡು ಬಾರಿ ಕ್ಯಾಬಿನೆಟ್ ಉಪ ಸಮಿತಿ ಸಭೆ ನಡೆಸಿ ಚರ್ಚಿಸಿದೆ ಎಂದು ಹೇಳಿದರು.  