ವಿಜಯಪುರ: ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಸೃಷ್ಠಿಯಾಗುತ್ತಿರುವ ಬೆನ್ನಲ್ಲೇ  ಬಿಜೆಪಿ ಶಾಸಕ ಬಸನಗೌಡ ಪಟೀಲ್ ಯತ್ನಾಳ್‌ ತಮ್ಮದೇ ಪಕ್ಷದ ಅಧ್ಯಕ್ಷರ ಮೇಲೆ ವಾಗ್ದಾಳಿ ಮುಂದುವರಿಸಿದ್ದು, "ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಮಾಡಿ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಸಿದ್ದಾರೆ"  ಅಲ್ಲದೇ ನನ್ನನ್ನು ಹಾಗೂ ಬೊಮ್ಮಾಯಿಯವರನ್ನು ಚುನಾವಣೆಯಲ್ಲಿ ಸೋಲಿಸಲು ಕ್ಷೇತ್ರದಲ್ಲಿ ಹಣ ಹಂಚಿದ್ದರು ಎಂದು ಗಂಬೀರ ಆರೋಪ ಮಾಡಿದ ವೀಡಿಯೋ ವೈರಲ್‌ ಆಗಿದೆ.ʼಬಿಜೆಪಿಯಲ್ಲಿ ಸುಮ್ಮನೆ ಏನೊ ಶಿಸ್ತು, ಶಿಸ್ತು ಅಂತಾರೆ ನಾವೇನು ಗುಲಾಮರಾ, ನಮ್ಮದೇನು ಶಕ್ತಿ ಇಲ್ಲವೇ, ನಮ್ಮ ಹಿಂದೆನೂ ಜನ ಇದ್ದಾರೆ. ಯಡಿಯೂರಪ್ಪ ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯದಲ್ಲಿ ಎಲ್ಲಿಯೂ ಹೋಗಲ್ಲ ಎಂದು ಹೆದರಿಸಿ  ಬ್ಲ್ಯಾಕ್ ಮೇಲ್ ಮಾಡಿ ಮಗನನ್ನು ಅಧ್ಯಕ್ಷರಾಗಿ ಮಾಡಿದ್ದಾರೆʼ ಎಂದರು.ಸೋಮಣ್ಣ ಅವರನ್ನು ಗೋವಿಂದರಾಜ್ ನಗರದಲ್ಲಿ ನಿಂತಿದ್ದರೆ 20-25 ಸಾವಿರ ಮತಗಳಿಂದ ಗೆಲ್ಲುತ್ತಿದ್ದರು. ಆದರೆ  ಸೋಮಣ್ಣ ಅವರನ್ನು ಬೇರೆ ಕಡೆ ನಿಲ್ಲಿಸಿ ಬಲಿಪಶು ಮಾಡಿ, ಸಿದ್ದರಾಮಯ್ಯಗೆ ಸಪೋರ್ಟ್ ಮಾಡಿದರು . ಕನಕಪುರದಲ್ಲಿ  ಹೊಂದಾಣಿಕೆ ಆಗಿತ್ತು. ಯಾವುದಾದರೂ ದೇವರು ಬಳಿ ಬರಲಿ ಒಮ್ಮೆ ಸತ್ಯ ಹೊರಬರಬೇಕು ರಾಜ್ಯದಲ್ಲಿ ಅಪ್ಪ, ಮಕ್ಕಳು ಏನು ನಡೆಸಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.