ಬೆಳಗಾವಿ: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಅಭಿವೃದ್ಧಿ ಹಾಗೂ ಸ್ಥಾನಮಾನ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ಮೂಲಕ ಪದೇ ಪದೇ ಕೇಳಿ ಬರುವ ಪ್ರತ್ಯೇಕ ರಾಜ್ಯದ ಕೂಗು ಪ್ರಬಲಗೊಳ್ಳಲು ಅವಕಾಶ ನೀಡದಂತೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.  ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿ ನಡೆಯುವ ಅಧಿವೇಶನದ ಮೊದಲ ದಿನವೇ ಉತ್ತರ ಕರ್ನಾಟಕ ಭಾಗದ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ, ಈವರೆಗೂ ಆಗಿಲ್ಲ. ಹಾಗಾದರೆ, ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ, ಅಧಿವೇಶನ ನಡೆಸುವ ಉದ್ದೇಶವೇನು? ಎಂದು ಪ್ರಶ್ನಿಸಿದರು.  ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಮುಂಬೈ ಹಾಗೂ ನಾಗ್ಪುರ ಎರಡು ರಾಜಧಾನಿಗಳಿವೆ. ನಾಗ್ಪುರದಲ್ಲಿ ವರ್ಷಕ್ಕೆ ಎರಡು ಬಾರಿ ಅಧಿವೇಶನ ನಡೆಸಲಾಗುತ್ತದೆ. ಆದರೆ, ನಾವು ಇಲ್ಲಿ ಕೇವಲ 10 ದಿನ ಮಾತ್ರ ಅಧಿವೇಶನ ನಡೆಸುತ್ತೇವೆ. ಅದರಲ್ಲಿ ಧರಣಿ, ಅಹೋರಾತ್ರಿ ಧರಣಿ ಎಂದು ಸಮಯ ಕಳೆದು ಹೋಗುತ್ತಿದೆ. ಹಾಗಾದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಾವು ಚರ್ಚೆ ಮಾಡೋದು ಯಾವಾಗ? ಎಂದು ಯತ್ನಾಳ್ ಪ್ರಶ್ನಿಸಿದರು.  ಆರ್.ಅಶೋಕ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನನಗೇನು ಬೇಜಾರಿಲ್ಲ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಉತ್ತರ ಕರ್ನಾಟಕದ ಜನರಿಗೆ ಗೊತ್ತಾಗಿದೆ. ನಮ್ಮ ಭಾಗಕ್ಕೆ ಅನ್ಯಾಯವಾದಾಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಬೆಂಗಳೂರು ಕೇಂದ್ರಿಕೃತ ಅಭಿವೃದ್ಧಿ ಆಗುತ್ತಿದೆ. ಉತ್ತರ ಕರ್ನಾಟಕದ ಜನ 12-15 ಸಾವಿರ ರೂ.ಸಂಬಳಕ್ಕೆ ಬೆಂಗಳೂರಿಗೆ ಹೋಗಿ ದುಡಿಯುವಂತಾಗಿದೆ ಎಂದು ಅವರು ಹೇಳಿದರು.  ಬಿಎಸ್‍ವೈ ವಿರುದ್ಧ ಪರೋಕ್ಷ ವಾಗ್ದಾಳಿ: ಬಿಜಾಪುರದಲ್ಲಿ ಒಂದು ರಸ್ತೆಯೂ ಸುಸ್ಥಿತಿಯಲ್ಲಿ ಇರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 1500 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೆ. ಆದರೆ, ನಮ್ಮ ಸರಕಾರ(ಯಡಿಯೂರಪ್ಪ ಸರಕಾರ) ಬಂದು ಆ ಅನುದಾನ ವಾಪಸ್ ಪಡೆದರು. ಜನರಿಗಾಗಿ ನಾವು ಹೋರಾಟ ಮಾಡಲೇಬೇಕಾಗುತ್ತದೆ. ಯಾರು ನನ್ನನ್ನು ಟಾರ್ಗೆಟ್ ಮಾಡಿದರೋ ಅವರು ಮಾಜಿ ಆಗಿದ್ದಾರೆ. ನಾನು ಟಾರ್ಗೆಟ್ ಮಾಡಿದರೆ ಅವರನ್ನು ಮಾಜಿ ಮಾಡದೆ ಬಿಡುವುದಿಲ್ಲ ಎಂದು ಯತ್ನಾಳ್ ಹೇಳಿದರು.  ಬಿಜಾಪುರಕ್ಕೆ ಒಂದು ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿಕೊಳ್ಳಲು ಐದು ವರ್ಷ ಅಲೆದಾಡಿದೆ. ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಮಂತ್ರಿ ನಮ್ಮ ಕೈಗೆ ಸಿಗಲಿಲ್ಲ. ಈಗ ಜನರೇ ಆತನನ್ನು ಯಾರ ಕೈಗೂ ಸಿಗದಂತೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದರು.  ಉತ್ತರ ಕರ್ನಾಟಕ ಭಾಗ ಹಿಂದುಳಿಯಲು ನಮ್ಮ ಜನಪ್ರತಿನಿಧಿಗಳು ಕಾರಣ. ನಾವು ಧ್ವನಿ ಎತ್ತಿದ್ದರೆ 100 ರೂ.ಗಳಲ್ಲಿ 20 ರೂ.ಗಳಾದರೂ ನಮಗೆ ಸಿಗುತ್ತಿತ್ತು. ಎಚ್.ಕೆ.ಪಾಟೀಲ್, ಎಂ. ಬಿ.ಪಾಟೀಲ್, ಬಸವರಾಜ ಬೊಮ್ಮಾಯಿ ಬಿಟ್ಟರೆ ಉಳಿದೆಲ್ಲಾ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರೇ ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದರು.  