ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 8: ನಾನು ಕುರ್ಚಿಗೆ ಅಂಟಿಕೊಂಡು ಕೂರುವುದಿಲ್ಲ. ಈ ಕ್ಷಣವೇ ಬೇಕಾದರೂ ರಾಜೀನಾಮೆ ನೀಡುವೆ ಎಂದು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾರ್ಮಿಕವಾಗಿ ಹೇಳಿದರು.  ಶುಕ್ರವಾರ ಪರಿಷತ್ತಿನ ಕಲಾಪದಲ್ಲಿ ಸರಕಾರ ಐದು ಗ್ಯಾರಂಟಿ ಯೋಜನೆಗಳಿಗೆ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ವಿಚಾರಕ್ಕೆ ವಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಪೀಠದಿಂದ ಎದ್ದು ನಿಂತು ಪ್ರಸ್ತಾಪಿಸಿದ ಅವರು, ಇದೇ ರೀತಿ ಪದ್ಧತಿ ಮುಂದುವರೆಸಿದರೆ ಸುಗಮ ಕಲಾಪ ನಡೆಸುವುದು ಬೇಡವೇ? ಎಂದರು.  ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಆದರೂ, ಈ ವಿಷಯದ ಗಂಭೀರತೆಯನ್ನು ಅರಿತು ಸೋಮವಾರ ಅರ್ಧ ಗಂಟೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.ಹಾಗಾಗಿ, ಧರಣಿ ಕೈಬಿಟ್ಟು ಹೊರಬನ್ನಿ ಎಂದು ರೂಲಿಂಗ್ ನೀಡಿದರು. ಆದರೂ, ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿಯೇ ಇದ್ದ ಕಾರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸ್ಥಾನದಲ್ಲಿ ನನಗೂ ಸಾಕಾಗಿದೆ. ನಾನು ಈ ಕುರ್ಚಿಗಾಗಿ ಅಂಟಿಕೊಂಡಿಲ್ಲ, ಈ ಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗುವೇ ಎಂದರು ತಿಳಿಸಿದರು.  