ಬೆಳಗಾವಿ: ಮುಜರಾಯಿ-ವಕ್ಫ್ ಆಸ್ತಿಗಳನ್ನು ಸರ್ವೇ ನಡೆಸಿ ಗಡಿ ಗುರುತಿಸಿ ರಕ್ಷಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.  ಬುಧವಾರ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಒತ್ತುವರಿ ಕುರಿತಂತೆ ಕಾಂಗ್ರೆಸ್ ಸದಸ್ಯ ಅಬ್ದುಲ್ ಝಬ್ಬಾರ್ ಪ್ರಶ್ನೆಗೆ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪರವಾಗಿ ಉತ್ತರಿಸಿದ ಅವರು, ರಾಜ್ಯದಲ್ಲಿ ಮುಜರಾಯಿ ಹಾಗೂ ವಕ್ಫ್ ಆಸ್ತಿಗಳು ಅಧಿಕ ಸಂಖ್ಯೆಯಲ್ಲಿದೆ. ಹೀಗಾಗಿ ಈ ಹಿಂದೆಯೇ ಆಸ್ತಿಗಳನ್ನು ಸರ್ವೇ ನಡೆಸಿ ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ರೈತರ ಸಮಸ್ಯೆಯೇ ಹೆಚ್ಚಿರುವ ಕಾರಣ ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಮೊದಲ ಆದ್ಯತೆ ಎಂದರು.  ಪ್ರಸ್ತುತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲಿ ಮುಜರಾಯಿ-ವಕ್ಫ್ ಆಸ್ತಿಗಳನ್ನು ಸರ್ವೆ ನಡೆಸಿ ಗಡಿ ಗುರುತಿಸಿ ರಕ್ಷಿಸಲಾಗುವುದು. ಅಲ್ಲದೆ, ಈ ಆಸ್ತಿಗಳನ್ನು ಡಿಜಿಟಲ್ ಡೇಟಾಬೇಸ್ ನಿರ್ವಹಿಸುವಂತೆಯೂ ಸರಕಾರದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.  ಇನ್ನೂ, ನಾಲ್ಕು ವರ್ಷಗಳಲ್ಲಿ ವಕ್ಫ್ ಆಸ್ತಿಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಒಟ್ಟು 1669 ಪ್ರಕರಣಗಳು ಸರಕಾರಕ್ಕೆ ಬಂದಿವೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.   