ಪೊಲೀಸ್ ಆಯುಕ್ತ ಬಿ.ದಯಾನಂದ್ಬೆಂಗಳೂರು: ನಗರದ ಶಾಲೆಗಳಿಗೆ ಇಮೇಲ್ ಮೂಲಕ ಬಂದಿದ್ದ ಬಾಂಬ್ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆಗಾಗಿ ಸಿಬಿಐ ಇಂಟರ್‍ಪೋಲ್ ಸೇರಿದಂತೆ ಇತರೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಪತ್ರ ಬರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.  ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022ರಲ್ಲಿ ಇದೇ ರೀತಿ ಆರು ಪ್ರಕರಣಗಳು ದಾಖಲಾಗಿದ್ದವು ಮತ್ತು ಈಗ 27 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.  2022ರಲ್ಲಿ ರಾಜರಾಜೇಶ್ವರಿನಗರ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗಳಿಗೆ ಬಂದಿದ್ದ ತಲಾ ಎರಡು ಪ್ರಕರಣಗಳನ್ನು ಬೇಧಿಸಿ ಅವು ಅಲ್ಲಿನ ವ್ಯಕ್ತಿಗಳೇ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿತ್ತು. ಈಗ ದಾಖಲಾಗಿರುವ 27 ಪ್ರಕರಣಗಳ ತನಿಖೆಯ ಪ್ರಗತಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.  ಅಮೆರಿಕ, ಜರ್ಮನಿ, ಮಲೇಷ್ಯಾ ಸೇರಿ ಅನೇಕ ಕಡೆ ವಿಶ್ವದಾದ್ಯಂತ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಅವುಗಳ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಕಳೆದ ಬಾರಿಯ ಬೆದರಿಕೆ ಸಂದೇಶಕ್ಕೂ ಈ ಬಾರಿ ಬೆದರಿಕೆ ಪತ್ರದಲ್ಲಿರುವ ಸಾರಾಂಶ ವಿಭಿನ್ನವಾಗಿದ್ದು, ಬೇರೆ ಬೇರೆ ಇಮೇಲ್ ವಿಳಾಸ ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದರು.  ವಿಪಿಎನ್ ಮತ್ತು ಫ್ಯಾಕ್ಸೊ ಸರ್ವರ್ ಬಳಸುವುದರಿಂದ ಐಪಿ ಅಡ್ರೆಸ್ ಪತ್ತೆಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ. ಸೈಬರ್ ತಜ್ಞರ ನೆರವು ಪಡೆದು ಪ್ರಕರಣವನ್ನು ಬೇಧಿಸುತ್ತೇವೆ ಎಂದು ಬಿ.ದಯಾನಂದ್ ಹೇಳಿದರು.  "ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮತ್ತಿಬ್ಬರು ನರ್ಸ್‍ಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ".  -ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ.  