ಬೆಳಗಾವಿ: ದೇವಾಲಯಗಳು ದುರಸ್ತಿ/ಜೀರ್ಣೋದ್ಧಾರ/ನಿರ್ಮಾಣ ಆರಾಧನ ಯೋಜನೆಯಡಿ ಅನುದಾನ ದುರ್ಬಳಕೆಯಾಗಿದ್ದರೆ ಆ ಎಲ್ಲ ದೇವಾಲಯಗಳ ಬಗ್ಗೆ ಪರಿಶೀಲಿಸಿ, ತನಿಖೆ ನಡೆಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ  ಭರವಸೆ ನೀಡಿದ್ದಾರೆ.  ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯೆ ಕರೆಮ್ಮ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ನಾವು ನಮ್ಮ ಇಲಾಖೆಯಿಂದ ಯಾವುದೇ ದೇವಸ್ಥಾನಗಳ ನಿರ್ಮಾಣ/ದುರಸ್ತಿಗೆ ಅನುದಾನ ಬಿಡುಗಡೆ ಮಾಡುವುದಿಲ್ಲ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಅವರೇ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಪಡಿಸಿದರು.  ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಕರೆಮ್ಮ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಆರೇಳು ದೇವಸ್ಥಾನಗಳ ವಿಳಾಸವೇ ಇಲ್ಲ. ಅಂತಹ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿದ್ದು, ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.  