ಹನೂರು, ಡಿ.2: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಹನೂರಿನ ಯುವಕನೋರ್ವನ ಅಂಗಾಂಗ ದಾನ ಮಾಡುವ ಮೂಲಕ ಆತನ ಹೆತ್ತವರು ನೋವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.ಹನೂರು  ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾ ದಂಪತಿಯ ಪುತ್ರ ದರ್ಶನ್  ರಸ್ತೆ ಅಪಘಾತವಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಮೈಸೂರಿನ ಖಾಸಗಿ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ತೀವ್ರತರದ ಗಾಯಗಳಾಗಿದ್ದರಿಂದ ದರ್ಶನ್ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದರು. ಈ ಶೋಕದಲ್ಲೂ ದರ್ಶನ್ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.  ಅದರಂತೆ ಕಾರ್ಯಪ್ರವೃತ್ತರಾದ ವೈದ್ಯರು ಮೈಸೂರಿನ ಅಪೋಲೋ ಆಸ್ಪತ್ರೆಗೆ  ದರ್ಶನ್  ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಶ(ಲಿವರ್), ಮೂತ್ರಪಿಂಡ(ಕಿಡ್ನಿ), ಕಣ್ಣುಗಳನ್ನು ರವಾನಿಸಿದರು.  