ಸಾಂದರ್ಭಿಕ ಚಿತ್ರ (Meta AI)ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಡಿ ಬರುವ ರಾಜ್ಯದ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಿಗೆ 2025-26ನೆ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಶುಕ್ರವಾರದಂದು ಪ್ರಕಟಿಸಿದೆ.2025-26ನೆ ಸಾಲಿನ ಶೈಕ್ಷಣಿಕ ಮತ್ತು ಸಂಯೋಜನಾ ವೇಳಾಪಟ್ಟಿಯು ಅಕ್ಟೋಬರ್‍ನಿಂದ ಆರಂಭವಾಗಿ 2025ರ ಎಪ್ರಿಲ್ ತಿಂಗಳೊಳಗೆ ಅಂತ್ಯಗೊಳ್ಳಲಿದೆ. ನಿಗಧಿತ ವೇಳಾಪಟ್ಟಿಯಂತೆ ತರಗತಿಗಳು ಆರಂಭವಾಗಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವೇಳಾಪಟ್ಟಿಯನ್ನು ಅನುಮೋದನೆ ಮಾಡಿದ್ದಾರೆ.   ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿನ ವೃತ್ತಿಪರವಲ್ಲದ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ 2025-26ನೆ ಸಾಲಿನ ಸಂಯೋಜನೆ ಪ್ರಕ್ರಿಯೆಯು ಇದೇ ಅ.25ರಿಂದ ಆರಂಭವಾಗಲಿದೆ. ಕಾಲೇಜುಗಳು ಸಂಯೋಜನೆಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿರುತ್ತದೆ. 2025ರ ಮಾ.31ಕ್ಕೆ ಕಾಲೇಜುಗಳ ಸಂಯೋಜನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   2025-26ನೆ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ತಾಂತ್ರಿಕ ಶಿಕ್ಷಣವನ್ನು ಹೊರತುಪಡಿಸಿ ಉನ್ನತ ಶಿಕ್ಷಣ ಇಲಾಖೆಯಡಿಲ್ಲಿ ಬರುವ 2025-26ನೆ ಸಾಲಿನ ವಿಶ್ವವಿದ್ಯಾಲಯಗಳು, ಅನುದಾನಿತ ಕಾಲೇಜು ಹಾಗೂ ಖಾಸಗಿ ಕಾಲೇಜುಗಳಲ್ಲಿ 2025ರ ಎ.15ರಂದು ಪದವಿಯ ಮೊದಲ ಸೆಮಿಸ್ಟರ್‍ನ ಪ್ರವೇಶಾತಿ ಆರಂಭವಾಗಲಿದೆ.   ಜೂ.9ರಿಂದ ಸೆ.26ರವರೆಗೆ ಪದವಿಯ ಎಲ್ಲ ಸೆಮಿಸ್ಟರ್‍ನ ತರಗತಿಗಳು ನಡೆಯಲಿವೆ. 2025ರ ಸೆ.29ರಿಂದ ನ.10ರವರೆಗೆ ಪರೀಕ್ಷೆ ಮತ್ತು ಸೆಮಿಸ್ಟರ್‍ನ ರಜೆ ದಿನಗಳು ಇರಲಿವೆ. ನ.12ರಿಂದ ಕಾಲೇಜುಗಳು ಪುನಾಃ ಆರಂಭವಾಗಲಿದೆ. 2026ರ ಎ.6ರಂದು ಶೈಕ್ಷಣಿಕ ವರ್ಷ ಅಂತ್ಯವಾಗಲಿದೆ.    2025ರ ಆ.19ರಂದು ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್‍ನ ಪ್ರವೇಶಾತಿ ಆರಂಭವಾಗಲಿದೆ. ಸೆ.1ರಿಂದ ಡಿ.19ರವರೆಗೆ ಸ್ನಾತಕೋತ್ತರ ಪದವಿಯ ಎಲ್ಲ ಸೆಮಿಸ್ಟರ್‍ನ ತರಗತಿಗಳು ನಡೆಯಲಿವೆ. 2025ರ ಡಿ.23ರಿಂದ 2026ರ ಫೆ.2ರವರೆಗೆ ಪರೀಕ್ಷೆ ಮತ್ತು ಸೆಮಿಸ್ಟರ್‍ನ ರಜೆ ದಿನಗಳು ಇರಲಿವೆ. 2026ರ ಮಾ.3ರಿಂದ ಕಾಲೇಜುಗಳು ಪುನಾಃ ಆರಂಭವಾಗಲಿದೆ. 2026ರ ಆ.10ರಂದು ಸ್ನಾತಕೋತ್ತರ ಪದವಿ ಶೈಕ್ಷಣಿಕ ವರ್ಷ ಅಂತ್ಯವಾಗಲಿದೆ.  ಎ.18, 19ಕ್ಕೆ ಸಿಇಟಿ: 2025-26ನೆ ಸಾಲಿನ ವೃತ್ತಿಪರ ಪದವಿ ಕೋರ್ಸ್‍ಗಳಾದ ಬಿ.ಇ., ಬಿ.ಟೆಕ್. ಬಿ.ಆರ್ಕ್ ಕೋಸ್‍ಗಳಿಗೆ 2025ರ ಎ.18 ಮತ್ತು 19ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ಮೇ 28ಕ್ಕೆ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಜೂ.25ಕ್ಕೆ ಮೊದಲ ಸುತ್ತಿನ ಕೌನ್ಸ್‍ಲಿಂಗ್ ನಡೆಯಲಿದೆ. ಜು.10 ಎರಡನೆ ಸುತ್ತಿನ ಹಾಗೂ ಜು.25ರಂದು ಅಂತಿಮ ಸುತ್ತಿನ ಕೌನ್ಸ್‍ಲಿಂಗ್ ನಡೆಯಲಿದೆ. ಆ.1ರಂದು ತರಗತಿಗಳು ಆರಂಭವಾಗಲಿವೆ.   ಜೂ.30ರಂದು ಪಿಜಿಸಿಇಟಿ: ಎಂಬಿಎ, ಎಂಸಿಎ, ಎಂಟೆಕ್ ಮತ್ತು ಎಂಆರ್ಕ್ ಪದವಿ ತರಗತಿಗಳಿಗೆ ಸಂಬಂಧಿಸಿದಂತೆ 2025ರ ಜೂ.30ರಂದು ಸ್ನಾತಕೋತ್ತರ ಪದವಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಪಿಜಿಸಿಇಟಿ) ನಡೆಯಲಿದೆ. ಆ.5ರಂದು ಫಲಿತಾಂಶ ಪ್ರಕಟವಾಗಲಿದ್ದು, ಆ.26ಕ್ಕೆ ಮೊದಲ ಸುತ್ತಿನ ಸೆ.4 ಎರಡನೆ ಸುತ್ತಿನ ಕೌನ್ಸ್‍ ಲಿಂಗ್ ನಡೆಯಲಿದೆ.   