ಕಲಬುರಗಿ, ಡಿ.1: ಕೆಟ್ಟು ನಿಂತಿದ್ದ ಗೂಡ್ಸ್ ವಾಹನವನ್ನು ದುರಸ್ತಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ಯಾಂಕರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಇವಣಿ ಬಳಿ ಕಳೆದ ರಾತ್ರಿ ನಡೆದಿದೆ.ಮೃತರನ್ನು ಪ್ರಶಾಂತ, ವಿಠಲ್ ಹಾಗೂ ಮಂಗಲಿ ಎಂದು ಗುರುತಿಸಲಾಗಿದೆ.   ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದಗೆ ತೆರಳುತ್ತಿದ್ದ ಗೂಡ್ಸ್ ಲಾರಿ ಇವಣಿ ಬಳಿ ತಲುಪಿದಾಗ ಕೆಟ್ಟು ನಿಂತಿದೆ. ಅದನ್ನು ರಿಪೇರಿ ಮಾಡುತ್ತಿದ್ದ ವೇಳೆ ಸಿಮೆಂಟ್ ಟ್ಯಾಂಕರ್ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.  ಈ ಬಗ್ಗೆ ಮಾಡಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  