ಬೆಂಗಳೂರು: ಬೆಂಗಳೂರು ಹಬ್ಬದ ಅಂಗವಾಗಿ ಚಿಕ್ಕಪೇಟೆಯಲ್ಲಿ ನಡೆದ ಕೆಂಪೇಗೌಡರ ಎತ್ತಿನ ಬಂಡಿ ಮೆರವಣಿಗೆಗೆ ಚಾಲನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಚಾಲನೆ ನೀಡಿದರು.  ಇಂದು ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಪ್ರಶಾಂತ್ ಪ್ರಕಾಶ್ ಹಾಗೂ ಅವರ ಸ್ನೇಹಿತರು ತಮ್ಮ ದುಡ್ಡಿನಲ್ಲಿ ನಮ್ಮ ಮನೆಯ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಂಗಳೂರಿನ 1.40 ಕೋಟಿ ಜನರು ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಪಡಬೇಕು ಎಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಶಿವಕುಮಾರ್ ಹೇಳಿದರು.  ನಾಡಪ್ರಭು ಕೆಂಪೇಗೌಡರು ಇದೇ ಜಾಗದಿಂದ ಎಲ್ಲ ವೃತ್ತಿ, ಎಲ್ಲಾ ಜನಾಂಗ, ಎಲ್ಲಾ ಧರ್ಮವನ್ನು ಒಟ್ಟಿಗೆ ಸೇರಿಸಿ ಬೆಂಗಳೂರು ನಗರ ಕಟ್ಟಿದರು. ಬೆಂಗಳೂರು ವಿಶ್ವಕ್ಕೆ ದೊಡ್ಡ ಮಾದರಿಯಾಗಿದೆ. ಪ್ರಪಂಚದ ಎಲ್ಲ ಜನ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇದಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯ ಕಾರಣ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.  ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಎಲ್ಲಾ ವರ್ಗದ ಜನ ಸುಭಿಕ್ಷವಾಗಿ ಇರಬೇಕು ಎಂಬುದು ನಮ್ಮ ಆಸೆ. ಈ ಬೆಂಗಳೂರು ಹಬ್ಬವನ್ನು 11 ದಿನಗಳ ಕಾಲ ಆಚರಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ರಾಜ್ಯ ಸರಕಾರ ಬಿಬಿಎಂಪಿ, ಮೆಟ್ರೋ ಸೇರಿದಂತೆ ಎಲ್ಲಾ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಎಲ್ಲಾ ಸಂಘಟನೆ ವ್ಯಾಪಾರಿಗಳು ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.  ಅಂದು ಕೆಂಪೇಗೌಡರು ಈ ಸ್ಥಳದಿಂದ ನಾಲ್ಕು ದಿಕ್ಕಿಗೆ ನಾಲ್ಕು ಜೋಡಿ ಎತ್ತಿನ ಗಾಡಿಯನ್ನು ತೆಗೆದುಕೊಂಡು ಹೋಗಿದ್ದರು. ಆ ಪದ್ಧತಿ ಮುಂದುವರಿಸಿಕೊಂಡು ಹೋಗುವ ಕೆಲಸ ಮಾಡಲಾಗುತ್ತಿದ್ದು, ಈ ಸುಸಂದರ್ಭದಲ್ಲಿ ನಾನು ಭಾಗಿಯಾಗಿ ಚಾಲನೆ ನೀಡಿದ್ದೇನೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಸಂಘಟನೆ, ಹೋರಾಟ ಮಾಡಿ, ಇಲ್ಲಿ ಬಂದು ಊಟ ಮಾಡುತ್ತಿದ್ದ ಕಾಲ ಈಗ ನೆನಪಿಗೆ ಬರುತ್ತಿದೆ ಎಂದು ಅವರು ತಿಳಿಸಿದರು.  ಕಲೆ, ಸಾಹಿತ್ಯ, ಆಹಾರ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಮುಂದೆ ಪ್ರತಿ ವಾರ್ಡ್, ವಿಧಾನಸಭಾ ಕ್ಷೇತ್ರದಲ್ಲಿ ಈ ಹಬ್ಬವನ್ನು ಆಯೋಜಿಸಿ ಆಯಾ ಭಾಗದ ಜನ ಅಲ್ಲೇ ಈ ಹಬ್ಬವನ್ನು ಆನಂದಿಸುವಂತೆ ಮಾಡಲಾಗುವುದು. ಎಲ್ಲರೂ ತಮ್ಮ ಮನೆಗಳಲ್ಲೂ ಈ ಹಬ್ಬದ ರೀತಿ ಅಲಂಕಾರ ಮಾಡಿ ಸುಂದರ ವಾತಾವರಣ ಮೂಡಿಸಬೇಕು. ಆ ಮೂಲಕ ನಮ್ಮ ಇತಿಹಾಸ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದು ಶಿವಕುಮಾರ್ ಹೇಳಿದರು.  