ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರೇರಿತ ನಿರ್ಧಾರದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.ಗುರುವಾರ ನಗರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕವಾಗಿದ್ದು, ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ? ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಹೇಳಿದರು.   2024ರಿಂದ ರಾಜ್ಯ ಶಿಕ್ಷಣ ನೀತಿ ತರುವ ಪ್ರಯತ್ನ ಖಂಡನೀಯವಾಗಿದ್ದು, ಇದು ಬೇಜವಾಬ್ದಾರಿ ಸರಕಾರ. ರಾಜ್ಯ ಶಿಕ್ಷಣ ನೀತಿ ರೂಪಿಸುವ ಸಮಿತಿಯಲ್ಲಿ ಇರುವವರು ಯಾರು? ಅಧ್ಯಕ್ಷರು ಯಾವ ಊರಿನವರು? ಶಿವಮೊಗ್ಗದವರೇ, ಮೈಸೂರಿನವರೇ? ರಾಜ್ಯ ಸಮಿತಿಯಲ್ಲಿ ಇಲ್ಲಿನವರು ಎಷ್ಟು ಜನ? ಹೊರ ರಾಜ್ಯದವರು ಎಷ್ಟು ಜನ ಎಂದು ಅವರು ಪ್ರಶ್ನಿಸಿದರು.  