ಸಾಂದರ್ಭಿಕ ಚಿತ್ರಬೆಂಗಳೂರು: ತಲೆಗೆ ಪೆಟ್ಟು ತಗುಲಿದ್ದ ಮಗುವಿಗೆ ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂದು ಚಿಕಿತ್ಸೆ ನಿರಾಕರಿಸಿದ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.  ಚಿಕ್ಕಮಗಳೂರಿನ ಬಸವನಗುಡಿ ನಿವಾಸಿಗಳಾದ ವೆಂಕಟೇಶ್ ಮತ್ತು ಜ್ಯೋತಿ ದಂಪತಿಯ ಒಂದು ವರ್ಷದ ಮಗುವು ಹಾಸನದ ಮನೆಯೊಂದರಲ್ಲಿ 10 ಅಡಿ ಮೇಲಿನಿಂದ ಬಿದ್ದು ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಸ್ಥಳಾಂತರಿಸುವಂತೆ ಸೂಚಿಸಿದ್ದರು.   ಅದರಂತೆ ಹಾಸನದಿಂದ ಬೆಂಗಳೂರಿನವರೆಗೆ 224 ಕಿ.ಮೀ. ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆಂಬ್ಯುಲೆನ್ಸ್ ಚಾಲಕ ಹಾಸನದಿಂದ ಬೆಂಗಳೂರಿಗೆ 224 ಕಿಮೀ ದೂರವನ್ನು 1 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಿ ನಿಮ್ಹಾನ್ಸ್ ತಲುಪಿದ್ದರು. ಅಲ್ಲದೆ ಹಾಸನದ ವೈದ್ಯರು ನಿಮ್ಹಾನ್ಸ್ ನ ಆಡಳಿತ ಘಟಕಕ್ಕೆ ಕರೆ ಮಾಡಿ ಮಗುವಿನ ತುರ್ತು ಚಿಕಿತ್ಸಾ ಅಗತ್ಯಗಳ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.ಆದರೆ, ನಿಮ್ಹಾನ್ಸ್ ಆಸ್ಪತ್ರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇಲ್ಲಿ ಬೆಡ್ ಇಲ್ಲ ಬೇರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗು ಆಂಬುಲೆನ್ಸ್ ನಲ್ಲೇ ಅರ್ಧಗಂಟೆ ನರಳಾಡಿ ಮೃತಪಟ್ಟಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ಪೊಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಗುವಿನ ಸಾವಿಗೆ ಕಾರಣವಾದ ತುರ್ತು ಪರಿಸ್ಥಿತಿಯ ಬಗ್ಗೆ ನಿಮ್ಹಾನ್ಸ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ‘ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಟ್ಟಣೆ ಹೆಚ್ಚಿದೆ. ವೈದ್ಯರು ಒತ್ತಡದ ನಡುವೆಯೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಮಗುವಿನ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತೇನೆ’-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ