ಬೆಂಗಳೂರು: ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡನೆ ಮಾಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಬೃಹತ್ ಚಳವಳಿ ನಡೆಸಿದರು.  ಬುಧವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು, ರಾಜ್ಯ ಸರಕಾರ ಈ ಬಾರಿಯ ಅಧಿವೇಶನದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿದರು.  ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಸಂಸ್ಥಾಪಕ ಎನ್.ಮೂರ್ತಿ, ಎ.ಜೆ. ಸದಾಶಿವ ಆಯೋಗದ ವರದಿಯನ್ನು ಉಭಯ ಸದನಗಳಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಅದೇ ರೀತಿ, ಕೇಂದ್ರ ಸರಕಾರ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಒಳ ಮೀಸಲಾತಿ ಬಗ್ಗೆ ಉಷಾಮೆಹ್ರ ಸಮಿತಿ (2008) ನೀಡಿರುವ ವರದಿಯಂತೆ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡಿ ಸಂವಿಧಾನದ ಷೆಡ್ಯೂಲ್ಡ್ 9ರಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.  ಇನ್ನೂ, ಸುಪ್ರೀಂ ಕೋರ್ಟ್‍ನ 7 ನ್ಯಾಯಾಧೀಶರ ಪೀಠದಲ್ಲಿರುವ ವಿವಿಧ ರಾಜ್ಯಗಳ ಒಳ ಮೀಸಲಾತಿ ಪ್ರಕರಣದ ಪರವಾಗಿ ಕೇಂದ್ರ ಸರ್ಕಾರ ಬಲವಾಗಿ ವಾದ ಮಂಡಿಸಿ ಒಳ ಮೀಸಲಾತಿ ವರ್ಗೀಕರಿಸಬೇಕು. ಕಾಂತರಾಜು ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ ಅಂಗೀಕರಿಸಿ ಜನ ಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.