ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟ ಹಾಗೂ ಪ್ರಗತಿ ಸಾಧಿಸುವ ಮೂಲಕ ಬ್ರಾಂಡ್ ಬೆಂಗಳೂರು ಅನ್ನು ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ತಲುಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.  ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನಡೆದ 17ನೆ ಅಂತಾರಾಷ್ಟ್ರೀಯ ಮುನ್ಸಿ ಪಾಲಿಕ-23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಭಾರತವೂ ಸುಸ್ಥಿರ ಬೆಳವಣಿಗೆ ಕಾಣಬೇಕು.ಹಾಗಾಗಿ, ರಾಜ್ಯದ 316 ನಗರಗಳಿಗೆ ಅಗತ್ಯ ಎಲ್ಲ ನಾಗರಿಕ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ ಎಂದರು.  ರಾಜ್ಯದಲ್ಲಿ ಶೇ.38 ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರೆಲ್ಲರಿಗೂ ಸಂಚಾರ ದಟ್ಟಣೆ ಸಮಸ್ಯೆ ಇಲ್ಲದಂತೆ, ಸುಗಮ ಸಂಚಾರ, ಅಗತ್ಯ ಕಸ ವಿಲೇವಾರಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಸೇರಿ ನಾಗರಿಕ ಸವಲತ್ತುಗಳನ್ನು ಒದಗಿಸುವುದು ಸವಾಲಿನ ಕೆಲಸ. ಇದನ್ನು ಒದಗಿಸುವುದು ಸರಕಾರದ ಗುರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   ನಾವು ನಗರ ಪ್ರದೇಶದ ಕುಡಿಯುವ ನೀರಿಗೆ 9 ಸಾವಿರ ಕೋಟಿ ಕೊಡಲು ನಿರ್ಧರಿಸಿರುವುದು ಸೇರಿದಂತೆ ನಗರ ಜೀವನಮಟ್ಟ ಇನ್ನಷ್ಟು ಸುಗಮಗೊಳಿಸಲು ಅಗತ್ಯ ಇರುವ ಎಲ್ಲ ವಲಯಗಳಿಗೂ ಸರಕಾರ ಅಗತ್ಯ ಅನುದಾನವನ್ನು ಒದಗಿಸುತ್ತಿದೆ ಎಂದ ಅವರು, ಈ ಬಾರಿ ನಾವು ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್‍ಗಳನ್ನು ತೆರೆಯುತ್ತಿದ್ದೇವೆ. ಬೆಲೆ ಏರಿಕೆ ಹೆಚ್ಚಾಗಿದ್ದರೂ ಹಿಂದಿನ ದರದಲ್ಲೇ ಬಡವರು, ಮಧ್ಯಮ ವರ್ಗದವರಿಗೆ ಊಟ-ಉಪಹಾರದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ನುಡಿದರು.  ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವಾರದ ಭೈರತಿ ಸುರೇಶ್, ರಹೀಂ ಖಾನ್, ಶಾಸಕ ತಮ್ಮಯ್ಯ, ವಿಧಾನ ಪರಿಷತ್ತಿನ ಸದಸ್ಯ ಎಸ್.ರವಿ, ಆಸ್ಟ್ರೇಲಿಯಾ ವ್ಯಾಪಾರ ಮತ್ತು ಹೂಡಿಕೆ ಆಯೋಗದ ಅಧ್ಯಕ್ಷೆ ಕ್ಯಾಥರಿನ್ ಗಲೇಘರ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಜಯರಾಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.  