ಬೆಂಗಳೂರು: ನ್ಯಾಯವಾದಿಗಳು ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಯಲ್ಲಿನ ಮನವಿ ಅಥವಾ ಕೋರಿಕೆಗಳಲ್ಲಿ(ಪ್ಲೀಡಿಂಗ್ಸ್) ಗುಣಮಟ್ಟ ಕುಸಿಯುತ್ತಿರುವುದರ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.  ಬ್ಯಾಂಕ್ ಆಫ್ ಬರೋಡ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಇಮಿಗ್ರೇಷನ್ ಅಧಿಕಾರಿಗಳಿಗೆ ಪತ್ರ ಬರೆದು ಲುಕ್ಔಟ್ ಸುತ್ತೋಲೆ(ಎಲ್ಒಸಿ) ಹಿಂಪಡೆಯಲು ಅಥವಾ ಎಲ್ಒಸಿ ತಿರಸ್ಕರಿಸಿ ಅರ್ಜಿದಾರರು ಪ್ರವಾಸ ಕೈಗೊಳ್ಳಲು ಇಮಿಗ್ರೇಷನ್ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರಿನ ಉದ್ಯಮಿ ಬಿ.ಆರ್.ಶೆಟ್ಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಪೀಠವು ಅರ್ಜಿಯಲ್ಲಿನ ಕೋರಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.  ಕೆಲವು ವಕೀಲರನ್ನು ಹೊರತುಪಡಿಸಿ ಅರ್ಜಿಯಲ್ಲಿನ ಕೋರಿಕೆಯ ಗುಣಮಟ್ಟ ಅತ್ಯಂತ ಕೆಳ ಮಟ್ಟಕ್ಕೆ ಇಳಿದಿದೆ. ಸಂಶೋಧನೆ ಎಲ್ಲಿದೆ? ಸೃಜನಾತ್ಮಕ ವಾದ ಎಲ್ಲಿದೆ? ಎಂದು ನ್ಯಾಯಪೀಠವು ಪ್ರಶ್ನಿಸಿತು. ಕೋರಿಕೆಗಳಲ್ಲಿ ಗುಣಮಟ್ಟ ಇಲ್ಲದಿರುವುದರಿಂದ ಪ್ರಕರಣಗಳ ಕುರಿತು ವಕೀಲರ ವಾದವು ಪರಿಣಾಮಕಾರಿಯಾಗಿಲ್ಲ. ಇದನ್ನು ಹಿರಿಯ ವಕೀಲರು ಸುಧಾರಿಸಲಾಗದು. ಏಕೆಂದರೆ ಅವರಿಗೆ ಬ್ರೀಫಿಂಗ್ ಮಾಡಲಾಗಿರುತ್ತದೆ ಎಂದು ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರನ್ನು ಕುರಿತು ಪೀಠ ಹೇಳಿತು. ನಾನು ಪದೇ ಪದೇ ಕೋರಿಕೆಗಳ ಬಗ್ಗೆ ಈ ವಿಷಯ ಹೇಳುತ್ತಿರುತ್ತೇನೆ. ಇದನ್ನು ನನಗೆ ತಡೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠವು ಹೇಳಿತು.   ಪ್ರತಿವಾದಿ ಬ್ಯಾಂಕ್‌ ಗಳನ್ನು ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ, ಪ್ಲೀಡಿಂಗ್ ಬಗ್ಗೆ ಖುಷಿಯಿದೆ. ಪ್ಲೀಡಿಂಗ್ ಸರಿಯಾಗಿ ಮಾಡಲಿಲ್ಲವಾದರೆ ಜನರನ್ನು ಹೇಗೆ ರಕ್ಷಿಸುತ್ತೀರಿ. ಬಾರ್‌ ನ ಗುಣಮಟ್ಟ ಸುಧಾರಿಸಬೇಕು. ಒಂದು ಕಡೆ ನಾವು ಜನರ ಮೂಲಭೂತ ಹಕ್ಕುಗಳ ರಕ್ಷಕರು. ಇನ್ನೊಂದು ಕಡೆ ನಾವು ಪ್ಲೀಂಡಿಂಗ್‌ ನ ಮಿತಿಗೆ ಒಳಪಟ್ಟಿರುತ್ತೇವೆ. ಅಲ್ಲಿ ಸಂಘರ್ಷ ಇದೆ. ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಕನಾದ ನ್ಯಾಯಾಲಯವು ಎಲ್ಲ ಪ್ರಯತ್ನ ಮಾಡಬೇಕು ಎಂದರು.  