ಬೆಂಗಳೂರು ನ 20: ಮೀನುಗಾರ ಸಮಯದಾಯದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮೀನುಗಾರರಿಗೆ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳನ್ನು ವಿತರಿಸಿದ ಬಳಿಕ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರಿಕೆ ವಿಶ್ವ ವಿದ್ಯಾಲಯ ಮಾಡುವ ಬಗ್ಗೆ ಮುಂದಿನ ವರ್ಷ ವಿಚಾರ ಮಾಡಲಾಗುವುದು. ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ‌ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ನೆರವನ್ನೂ ನೀಡುತ್ತದೆ ಎಂದು ಭರವಸೆ ನೀಡಿದರು.ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿನಿಂದಲೂ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆ. ಆದರೂ ಹಿಂದಿನ ಸರ್ಕಾರ ಮತ್ತು ಸರ್ಕಾರದಲ್ಲಿದ್ದ ಸಚಿವರು ಪರಿಹಾರ ಒದಗಿಸಲೇ ಇಲ್ಲ. ರಿಯಾಯಿತಿ ಡೀಸೆಲ್ ಕೊಡುವಂತೆ ನಾವು ಅಧಿವೇಶನದಲ್ಲಿ ಹೋರಾಟ ಮಾಡಿದರೂ ಸರ್ಕಾರ ಕೊಡಲಿಲ್ಲ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಬಳಿಕ ಬೇಡಿಕೆ ಈಡೇರಿಸಿದ್ದೇವೆ. ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂಪಾಯಿ ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ  ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭವಾಗುತ್ತದೆ ಎಂದು ವಿವರಿಸಿದರು. 1977 ರಲ್ಲಿ ದೆಹಲಿಯಲ್ಲಿ ಹತ್ತಾರು ದೇಶಗಳ ಮೀನುಗಾರ ಸಮುದಾಯದ ಪ್ರತಿನಿಧಿಗಳ ಮೊದಲ ಸಭೆ ನಡೆಯಿತು. ಅಲ್ಲಿಂದ ಪ್ರತಿವರ್ಷ ವಿಶ್ವ ಮೀನುಗಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ಮೀನುಗಾರ ಸಮುದಾಯದ ಜತೆ ನೇರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳನ್ನು ಆಲಿಸಿ ಎಲ್ಲಾ ಸಮಸ್ಯೆಗಳಿಗೂ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು. ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಮೀನುಗಾರ ಸಮುದಾಯಕ್ಕೆ ಮತ್ತು ಸಮುದಾಯದ ಮಕ್ಕಳಿಗೆ ನೀಡಿರುವ ಸರ್ಕಾರದ ಸವಲತ್ತುಗಳನ್ನು ವಿವರವಾಗಿ ತಿಳಿಸಿದರು.  ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್ ವೈದ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಮಾ ಫಾಹಿಮ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.