ಕಲಬುರಗಿ: ಅಫಜಲಪುರ ತಾಲೂಕಿನ ಚಿಣಮಗೇರಾ ಸರಕಾರಿ ಶಾಲಾ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿರುವ ಎರಡನೇ ತರಗತಿ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮೃತಪಟ್ಟ ಸಂಬಂಧಿಸಿದಂತೆ ತಾಯಿ 7 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಮೃತಪಟ್ಟ ವಿದ್ಯಾರ್ಥಿನಿ ಮಹಾಂತಮ್ಮ (8) ಅವರ ತಾಯಿ ಸಂಗೀತಾ ಅವರು ನೀಡಿದ ದೂರಿನ ಮೇರೆಗೆ ದೇವಲಗಾಣಗಾಪುರ ಪೊಲೀಸರು ಶಾಲಾ ಮುಖ್ಯ ಶಿಕ್ಷಕಿ, ಅಡುಗೆ ಸಿಬ್ಬಂದಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನವೆಂಬರ್ 16ರಂದು ಬಿಸಿಯೂಟ ತಯಾರಿಸುವ ಸಾಂಬಾರು ಪಾತ್ರೆಯಲ್ಲಿ ವಿದ್ಯಾರ್ಥಿನಿ ಬಿದ್ದಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತಮ್ಮಳನ್ನ ಕಲಬುರಗಿಯ ಜಿಮ್ಸ್‌ಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ರವಿವಾರ) ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.  