ಬೆಂಗಳೂರು: ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಯಾವುದೆ ರೀತಿಯಲ್ಲಿ ಅನ್ಯಾಯವಾಗಿಲ್ಲ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಎಚ್.ಮೊಕಾಶಿ ಸ್ಪಷ್ಟಣೆ ನೀಡಿದ್ದಾರೆ.ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ವಾರ್ತಾಭಾರತಿ ವೆಬ್‌ಸೈಟ್‌ನಲ್ಲಿ ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನ್ಯಾಯ; ಪದವಿ ವಿದ್ಯಾರ್ಥಿಗಳ ಆರೋಪ’ ಎಂದು ಪ್ರಕಟವಾಗಿರುವ ಸುದ್ದಿಯು ಮಾಹಿತಿ ಕೊರತೆಯಿಂದ ಕೂಡಿದೆ ಎಂದು ತಿಳಿಸಿದರು.  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2023-24ನೆ ಸಾಲಿನಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ವರದಿಯಲ್ಲಿ ತಿಳಿಸಿರುವಂತೆ ಸೆ.6 ರಿಂದ 16ರವರೆಗೆ 10 ದಿನ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರಲಿಲ್ಲ. ಬದಲಾಗಿ, ಸೆ.26ರವರೆಗೆ 20 ದಿನಗಳ ಕಾಲ ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದರು.  ಉಚಿತ ತರಬೇತಿ ಪಡೆಯಲು 3300 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2450 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾರು ಪದವಿ ಪೂರ್ಣಗೊಳಿಸಿರುತ್ತಾರೋ ಅವರು ಮಾತ್ರ ಬರೆಯಲು ಅವಕಾಶ ಇರುತ್ತದೆ. ವಿಶ್ವವಿದ್ಯಾಲಯಗಳು ಪದವಿ ತರಗತಿಗಳ ಫಲಿತಾಂಶ ಪ್ರಕಟಿಸುವವರೆಗೆ ನಾವು ನಿರೀಕ್ಷೆ ಮಾಡಿಕೊಂಡು ಇರಲು ಸಾಧ್ಯವಿಲ್ಲ ಎಂದು ಜಿಲಾನಿ ಎಚ್. ಮೊಕಾಶಿ ತಿಳಿಸಿದರು.  ಮುಂದಿನ ಸಾಲಿನ ಮೇ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಇರುತ್ತವೆ. ನಾವು ಅಭ್ಯರ್ಥಿಗಳಿಗೆ ಆದಷ್ಟು ಬೇಗ ತರಬೇತಿಯನ್ನು ನೀಡಬೇಕಾಗಿರುತ್ತದೆ. ಕೇವಲ ಎರಡು, ಮೂರು ತಿಂಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ತರಬೇತಿ ನೀಡಲು ಸಾಧ್ಯವೇ? ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಯಾವುದೆ ರೀತಿಯ ಅನ್ಯಾಯವಾಗದಂತೆ ನಾವು ನಮ್ಮ ಇಲಾಖೆ ವತಿಯಿಂದ ತ್ವರಿತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೇವೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ನಾವು ಯಾವುದೆ ತಪ್ಪು ಮಾಡಿಲ್ಲ ಎಂದು ಅವರು ಹೇಳಿದರು.