ರಂಜಿತ್‌ - ಬಂಧಿತ ವ್ಯಕ್ತಿಬೆಂಗಳೂರು ನ.15: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್‍ರನ್ನು ಕೊಂದು ಹಾಕಿ ಎಂದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿ ರಂಜಿತ್ ಆರ್.ಎಂ., ಎಂದು ಗುರುತಿಸಲಾಗಿದೆ. ‘ಡಿಕೆ ಸಹೋದರರನ್ನು ಕೊಲ್ಲಿ' ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದನು. ಈ ಸಂಬಂಧ ಬೆಂಗಳೂರಿನ ಜಯನಗರ ಬ್ಲಾಕ್‍ನ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ದೂರು ದಾಖಲಿಸಿದ್ದರು. ಈ ಬೆನ್ನಲ್ಲೆ ಪೊಲೀಸರು ಬುಧವಾರ ರಂಜಿತ್‍ ನನ್ನು ಬಂಧಿಸಿದ್ದಾರೆ.  ಇನ್ನು ಬಂಧಿತ ವ್ಯಕ್ತಿಯು ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪೋಸ್ಟ್‌ ಗಳನ್ನು ಹಾಕುತ್ತಿದ್ದರು. ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್ ಅವರನ್ನು ಉಲ್ಲೇಖಿಸಲು ಡಿಕೆ ಸಹೋದರರು ಎಂಬ ಪದವನ್ನು ಬಳಸಿದ್ದ.  ಆರೋಪಿಯು ಬೆಂಗಳೂರು ನಗರ ಪೊಲೀಸರ ಬಳಿ ಸೈಬರ್ ಕ್ರೈಂ ಡಿಟೆಕ್ಟಿವ್ ಎಂದು ಹೇಳಿಕೊಂಡಿದ್ದು, ಜಯನಗರ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.‌  