ಸಾಂದರ್ಭಿಕ ಚಿತ್ರಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮೂವರಿಗೆ ಚಾಕು ಇರಿದಿರುವ ಘಟನೆ ಜೆಪಿ ನಗರ ಬಳಿ ಗುರುವಾರ ರಾತ್ರಿ ವರದಿಯಾಗಿದೆ.ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್​ ಸೋನು (19) ಚಾಕು ಇರಿತದಿಂದ ಗಾಯಗೊಂಡವರು ಎಂದು ತಿಳಿದುಬಂದಿದೆ. 15 ದಿನಗಳ ಹಿಂದೆ ​ಸಮೀರ್​​​, ಫರಾಝ್​ ಮತ್ತು ಸಲ್ಲು, ಸೆಬು, ಸೋನು, ಕತ್ರು ಎಂಬವರ ಗುಂಪುಗಳ​ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.ಇದೇ ವಿಚಾರಕ್ಕೆ ಗುರುವಾರ ಜೆಪಿ ನಗರದ ಜಂಡೆಕಟ್ಟೆ ಬಳಿ ಗ್ಯಾರವಿ ಸಂಭ್ರಮದಲ್ಲಿ ಭಾಗಿಯಾಗಿದ್ದ ಯುವಕರ 2 ಗುಂಪು, ಪರಸ್ಪರ ಗುರಾಯಿಸಿಕೊಂಡು, ಮತ್ತೆ ಮಾರಕಾಸ್ತ್ರದಿಂದ ಬಡಿದಾಡಿಕೊಂಡಿದ್ದಾರೆ. ಈ ವೇಳೆ  ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.