ಕೊಪ್ಪಳ, ನ.7: ಬಗರ್ ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಸಹಕಾರಿಯಾಗುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಆ್ಯಪ್ ಮೂಲಕ ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಶದ ಮೂಲಕವೆ ಒದಗಿಸಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಾಗುವಳಿ ಚೀಟಿ ನೀಡುವುದು ಅಸಾಧ್ಯ ಎಂದರು.  ಸಾವಿರಾರು ಎಕರೆ ಸರಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೆ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೆ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.  ಕೃಷಿ ಜಮೀನಿಗೆ ರೈತರು ಓಡಾಡಲು ರಸ್ತೆ ಕಲ್ಪಿಸಿಕೊಡಿ, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗಾಗಿ ಸಾಗುವಳಿ ಚೀಟಿ ನೀಡಿ. ತಮ್ಮದೇ ಕೃಷಿ ಭೂಮಿಗೆ ಓಡಾಡಲು ರೈತರಿಗೆ ರಸ್ತೆ ಇಲ್ಲದೆ ಸಮಸ್ಯೆ ನೀಗಿಸಲು ಕಳೆದ ವಾರ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು ಎಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.  ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಮುನ್ನ ಅಂತಹ ಪ್ರದೇಶಗಳಲ್ಲೂ ಕೃಷಿ ಭೂಮಿಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಮುಂದಿನ ಆರು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಬೇಕು. ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೆ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು ಎಂದು ಅವರು ಸೂಚನೆ ನೀಡಿದರು.  ಅಣೆಕಟ್ಟೆಗಳಲ್ಲಿ ನೀರಿನ ಸ್ವೇಚ್ಚಾಚಾರದ ನಿರ್ವಹಣೆಯಿಂದ ಇಂದು ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಅತ್ಯುತ್ತಮ ಮಳೆ ಆಗಿತ್ತು. ಆದರೆ, ನೀರನ್ನು ಬೇಕಾಬಿಟ್ಟಿಯಾಗಿ ಬಳಸಿದ ಕಾರಣ ಜೂನ್ ತಿಂಗಳಿಗೆ ಸಮಸ್ಯೆ ಉಂಟಾಗಿತ್ತು. ಇದು ನಿಜಕ್ಕೂ ಸ್ವೇಚ್ಚಾಚಾರದ ನಡವಳಿಕೆ ಎಂದು ಅವರು ಕಿಡಿಕಾರಿದರು.  ಈ ವರ್ಷ ಉತ್ತಮ ಮಳೆಯಾಗಿಲ್ಲ. ಈ ವರ್ಷವೂ ಅಧಿಕಾರಿಗಳು ಅಂತಹದ್ದೆ ನಡವಳಿಕೆ ಮುಂದುವರೆಸಿದರೆ, ಎಪ್ರಿಲ್-ಮೇ ತಿಂಗಳಿಗೆ ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ. ಇದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಕೃಷ್ಣಬೈರೇಗೌಡ ಸೂಚಿಸಿದರು.  ಬೆಳೆ ಪರಿಹಾರ: ಬೆಳೆ ಪರಿಹಾರ ಆನ್‍ಲೈನ್ ಮೂಲಕವೆ ರೈತರಿಗೆ ತಲುಪಲಿದ್ದು, ಅವರ ಮಾಹಿತಿ ಬಿಟ್ಟುಹೋದರೆ ಮ್ಯಾನ್ಯುವಲ್ ಆಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಶೇ.100ರಷ್ಟು ಎಲ್ಲ ರೈತರ ಬೆಳೆ ಸಮೀಕ್ಷೆ ನಡೆಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.  ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು, ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು ಎಂದು ಅವರು ಹೇಳಿದರು.   ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 36 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ  27 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಿ ಹಕ್ಕುಪತ್ರ ನೀಡುವುದು ಯಾವಾಗ? ಎಂದು ಕೃಷ್ಣಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಇ-ಆಫೀಸ್ ಶೇ.100ರಷ್ಟು ಬಳಕೆಗೆ ತಾಕೀತು: ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಎಲ್ಲ ತಾಲೂಕುಗಳಲ್ಲೂ ಇ-ಆಫೀಸ್ ಅನುμÁ್ಠನಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಎಲ್ಲ ಕಡತಗಳೂ ಇ-ಆಫೀಸ್ ಮೂಲಕ ವಿಲೇವಾರಿಯಾಗುತ್ತಿಲ್ಲ. ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಮುಂದಾದರೆ, ಎಲ್ಲ ಕೆಲಸಗಳೂ ವೇಗ ಪಡೆಯುತ್ತದೆ. ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತದೆ. ಹೀಗಾಗಿ ಶೀಘ್ರದಲ್ಲಿ ಕೊಪ್ಪಳದಲ್ಲಿ ಇ-ಆಫೀಸ್ ಅನ್ನು ಶೇ.100 ರಷ್ಟು ಸಂಪೂರ್ಣವಾಗಿ ಅನುμÁ್ಠನಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.  