ಕೆಂಪೇಗೌಡ ವಿಮಾನ ನಿಲ್ದಾಣಬೆಂಗಳೂರು, ನ.2: ಮಹಿಳೆಯೊಬ್ಬರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಶೌಚಾಲಯಕ್ಕೆ ಹೋಗುವ ಮುನ್ನ ಹೊರಗಿಟ್ಟಿದ್ದ ವಜ್ರದ ಉಂಗುರ, ಕಿವಿಯೋಲೆ ಹಾಗೂ ಒಂದು ಲಕ್ಷ ರೂ. ಹಣವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ವರದಿಯಾಗಿದೆ.ಟರ್ಮಿನಲ್-1ರ ನಿರ್ಗಮನ ಗೇಟ್ ನಂಬರ್-1 ಸಮೀಪದ ಶೌಚಾಲಯದ ಬಳಿ ಬ್ಯಾಗ್ ನಾಪತ್ತೆಯಾಗಿದ್ದು, ಈ ಸಂಬಂಧ ಕೆಐಎಎಲ್ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ.  ಅ.29ರಂದು ಬಸವೇಶ್ವರನಗರದ ನಿವಾಸಿ ಶಾಲು ಅಗರ್ವಾಲ್ ಎಂಬುವರು ನಗರದಿಂದ ಅಹಮದಾಬಾದ್‍ಗೆ ಪ್ರಯಾಣಿಸಬೇಕಿತ್ತು. ಬೆಳಗ್ಗೆ 7 ಗಂಟೆಗೆ ಏರ್ಪೋರ್ಟ ಗೆ ಬಂದಿದ್ದ ಅವರು ಸೆಕ್ಯೂರಿಟಿ ಚೆಕ್ ಇನ್ ಆದ ನಂತರ, ನಿರ್ಗಮನ ಗೇಟ್ ನಂಬರ್ 1ರ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಬ್ಯಾಗ್ ಅನ್ನು ಶೌಚಾಲಯದ ಹೊರಗಡೆ ಇಟ್ಟು ಒಳಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ಬ್ಯಾಗ್ ಕಾಣೆಯಾಗಿತ್ತು. ಬ್ಯಾಗ್‍ನಲ್ಲಿದ್ದ ಒಂದು ವಜ್ರದ ಉಂಗುರ, ಒಂದು ಜೊತೆ ಕಿವಿಯೋಲೆ ಮತ್ತು 1 ಲಕ್ಷ ರೂಪಾಯಿ ಹಣ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.