ಮೈಸೂರು :  ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,"ಹೈಕಮಾಂಡ್ ಒಪ್ಪಿದರೆ ಹಾಗೂ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಆದರೆ ಈಗ ಆ ಬದಲಾವಣೆ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.ʼನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ದೊಡ್ಡವನು. ನಾನು ಸಿದ್ದರಾಮಯ್ಯ ಉತ್ತಮ ಸ್ನೇಹಿತರು. ಸಚಿವನಾಗಿ ಎಲ್ಲಾ ಇಲಾಖೆಗಳನ್ನು ಅನುಭವಿಸಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕಷ್ಟೆ. ಎಲ್ಲರಂತೆ ನನಗೂ ಸಿಎಂ ಆಗಬೇಕು ಎಂಬ ಆಸೆ ಇದೆ. ಮಹತ್ವಾಕಾಂಕ್ಷೆ ಇರಬೇಕಲ್ಲವಾʼ ಎಂದು ಹೇಳಿದರು."ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ನನಗೆ ಗೊತ್ತಿಲ್ಲದೆ ಅಂಥಹ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ನಡೆಸಿರುವ ಸಭೆ ಇಲಾಖೆಗಳಿಗೆ ಸಂಬಂಧಪಟ್ಟಿದ್ದಷ್ಟೇ. ಸಿದ್ದರಾಮಯ್ಯ ಅವಧಿ ಪೂರೈಸುತ್ತಾರೆ" ಎಂದು ಪ್ರತಿಕ್ರಿಯಿಸಿದರು.ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ. ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎನ್ನುತ್ತಿರುವವರು ಆರೋಪದ ಬಗ್ಗೆ ದಾಖಲೆ ಕೊಟ್ಟರೆ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.