ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ಕಾಣಿಸಿಕೊಂಡು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಇಂದು (ಬುಧವಾರ) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.  ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ 4 ದಿನಗಳಿಂದ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಮೈಸೂರಿನಿಂದ ತಜ್ಞರ ತಂಡ ಸಹ ಆಗಮಿಸಿತ್ತು.   ಅಕ್ಟೋಬರ್ 27 ರಂದು ರಾತ್ರಿ ಚಿರತೆ ಸಿಂಗಸಂದ್ರದ ಸಮೀಪ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಂದಿನಿಂದ ಚಿರತೆ ಕಾಣಿಸಿಕೊಂಡಿರಲಿಲ್ಲ.ಆ ಬಳಿಕ ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಲೇಔಟ್‌ನ ಬಾಳುಬಿದ್ದ ಬೃಹತ್ ಕಟ್ಟಡವೊಂದರಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಚಿರತೆಯ ಸುಳಿವು ಅಲ್ಲಿಯೂ ಸಿಗಲಿಲ್ಲ. ಕಟ್ಟಡದ ಸುತ್ತಮುತ್ತಲಿನ ಐದು ಸ್ಥಳದಲ್ಲಿ ಬೋನ್‌ಗಳನ್ನು ಇಡಲಾಗಿತ್ತು. ಸದ್ಯ ಕೊನೆಗೂ ಚಿರತೆ ಸೆರೆ ಸಿಕ್ಕಿದೆ.  