ಮಡಿಕೇರಿ ಅ.31 : ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಬರೆ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ನಡೆದಿದೆ.ಹುಬ್ಬಳ್ಳಿ ಮೂಲದವರಾದ ಬಸವ (35), ಲಿಂಗಪ್ಪ (45) ಹಾವೇರಿ ಮೂಲದ ಆನಂದ್  (35) ಮೃತಪಟ್ಟವರು ಎಂದು ತಿಳಿದು ಬಂದಿದೆ.  ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಣ್ಣು ತೆಗೆಯುತ್ತಿದ್ದ ಸಂದರ್ಭ ಬರೆ ಕುಸಿದಿದೆ. ಈ ಘಟನೆಯಿಂದ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದರು. ಅದೃಷ್ಟವಶಾತ್ ಕಾರ್ಮಿಕ ರಾಜು ಎಂಬುವವರು ಇತರ ಕಾರ್ಮಿಕರ ಸಹಕಾರದಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ.ಉಳಿದ ಮೂವರು ಮಣ್ಣಿನಡಿ ಸಿಲುಕಿಕೊಂಡ ಪರಿಣಾಮ ಮೇಲೆ ಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 9 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿದರು.ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರುಗಳು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ಸಂದರ್ಭ ಸ್ಥಳದಲ್ಲಿದ್ದರು    