ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಯಾವುದೆ ರೀತಿಯ ಕಾನೂನು ಬಾಹಿರ ತಪ್ಪುಗಳನ್ನು ಮಾಡಿಲ್ಲ. ತನಿಖಾ ಆಯೋಗದ ವರದಿಯನ್ನು ನೋಡುವವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.  ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಜಾನ್ ಮೈಕಲ್ ಡಿಕುನ್ಹಾ ನೇತೃತ್ವದ ಆಯೋಗ ಸರಕಾರಕ್ಕೆ ವರದಿ ಸಲ್ಲಿಸಿರುವ ಕುರಿತು ರವಿವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.  ಕೋವಿಡ್ ಸಂದರ್ಭದಲ್ಲಿ ನಾನು ಹೇಗೆ ಕೆಲಸ ಮಾಡಿದ್ದೇನೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಐವರು ಸಚಿವರನ್ನು ಒಳಗೊಂಡ ಟಾಸ್ಕ್ ಫೋರ್ಸ್, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ಕೋವಿಡ್‍ಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನಗಳಿದ್ದರೂ ಟಾಸ್ಕ್ ಫೋರ್ಸ್‍ನಲ್ಲಿ ಚರ್ಚಿಸಿ ತೆಗೆದುಕೊಳ್ಳಲಾಗುತ್ತಿತ್ತು ಎಂದು ಅವರು ಹೇಳಿದರು.  ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದ ಸಂದರ್ಭ ಅದು. ಆಗ ಬಳಸಿದ ಔಷಧಗಳಿಗೆ ಇವತ್ತಿನ ದರದ ಆಧಾರದಲ್ಲಿ ಲೆಕ್ಕ ಹಾಕಿರುವುದಾಗಿ ತಿಳಿದು ಬಂದಿದೆ. ಆರೋಗ್ಯ ವ್ಯವಸ್ಥೆಯನ್ನು ನಾವು ಯಾವ ರೀತಿಯಲ್ಲಿ ಉತ್ತಮ ಪಡಿಸಿದೆವು ಎಂಬುದು ಜನರಿಗೆ ಗೊತ್ತಿದೆ. ಈ ಸರಕಾರ ನಮ್ಮ ಮೇಲೆ ದ್ವೇಷ ಸಾಧಿಸಲು ಹೊರಟಿದೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.  ನ್ಯಾ.ಕುನ್ಹಾ ವರದಿ ನೀಡಲು ಇನ್ನೂ ಆರು ತಿಂಗಳು ಕಾಲಾವಕಾಶ ಕೋರಿದ್ದರು. ಆದರೆ, ಅವರ ಮೇಲೆ ಒತ್ತಡ ಹಾಕಿ ಮಧ್ಯಂತರ ವರದಿಯನ್ನು ಸರಕಾರ ಪಡೆದಿದೆ ಎಂದು ಆರೋಪಿಸಿದ ಅವರು, ಕುನ್ಹಾ ಸರಿಯಾದ ವರದಿಯನ್ನೆ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.  ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡಿದ್ದರೆ, ಇವತ್ತು ಹಲವಾರು ನಾಯಕರು ಜೈಲಿನಲ್ಲಿರಬೇಕಿತ್ತು. ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುತ್ತೇನೆ ಎಂದು ಸುಧಾಕರ್ ತಿಳಿಸಿದರು.  