ಚಿಕ್ಕಮಗಳೂರು, ಆ.26: ಕಾಫಿನಾಡಿನಲ್ಲಿ ಅರಣ್ಯಾಧಿಕಾರಿಗಳು ಹುಲಿ ಉಗುರುಗಳ ಬೆನ್ನು ಬಿದ್ದಿರುವ ಮಧ್ಯೆ ಅರಣ್ಯ ಇಲಾಖೆಯ ಅಧಿಕಾರಿಯೇ ಹುಲಿ ಉಗುರು ಇರುವ ಆಭರಣ ಧರಿಸಿರುವ ಆರೋಪ ಕೇಳಿ ಬಂದಿದೆ.ಜಿಲ್ಲೆಯ ಕಳಸ ತಾಲೂಕಿನಲ್ಲಿ ಡಿಆರ್ ಎಫ್‍ಒ ಆಗಿ ಕೆಲಸ ಮಾಡುತ್ತಿರುವ ಆಲ್ದೂರು ಮೂಲದ ದರ್ಶನ್ ಎಂಬವರು ಧರಿಸಿರುವ ಆಭರಣದಲ್ಲಿ ಹುಲಿ ಉಗುರು ಇದ್ದು, ಈ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಆಲ್ದೂರು ಹೋಬಳಿ ವ್ಯಾಪ್ತಿಯ ಅರೇನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯದ ಅರಣ್ಯಾಧಿಕಾರಿಗೆ ದೂರು ನೀಡಿದ್ದಾರೆ.ಗುರುವಾರ ಆಲ್ದೂರು ವಲಯದ ಅರಣ್ಯಾಧಿಕಾರಿಗೆ ಲಿಖಿತ ದೂರು ನೀಡಿರುವ ಸುಪ್ರೀತ್ ಹಾಗೂ ಅಬ್ದುಲ್, ಕಳಸ ಉಪವಲಂಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಅವರು ಹುಲಿ ಉಗುರು ಇರುವ ಡಾಲರ್ ಧರಿಸಿದ್ದು, ಈ ಸಂಬಂಧ ತನಿಖೆ ನಡೆಸಿ ಅಧಿಕಾರಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.