ಬೆಂಗಳೂರು: ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ(ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಫ್ಲೇಟ್-ಎಚ್‍ಎಸ್‍ಆರ್‍ಪಿ) ಉತ್ಪಾದಕರಿಗೆ ಒಪ್ಪಿಗೆ ನೀಡುವ ಸಂಬಂಧ ಮುಂದಿನ 15 ದಿನಗಳಲ್ಲಿ ಅನುಮತಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‍ನ ಏಕಸದಸ್ಯ ಪೀಠ ಮಾಡಿದ್ದ ಆದೇಶವನ್ನು ವಿಭಾಗೀಯ ಪೀಠವು ಮುಂದಿನ ವಿಚಾರಣೆವರೆಗೆ ಅಮಾನತಿನಲ್ಲಿಟ್ಟು ಬುಧವಾರ ಆದೇಶಿಸಿದೆ.2019ರ ಎ.1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರಕಾರ 2023ರ ಆ.18ರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಜಾರಿ ಮಾಡುವುದಕ್ಕೆ 90 ದಿನಗಳ ಕಾಲಮಿತಿ ವಿಸ್ತರಣೆ ಮಾಡಬೇಕು ಎಂದು ಕೋರಿ ಬೆಂಗಳೂರಿನ ಎಸ್.ಗೌರಿಶಂಕರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು.  ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಂ ಹುಯಿಲಗೋಳ ಅವರು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2023ರ ಸೆ.20ರಂದು ಏಕಸದಸ್ಯ ಪೀಠವು ಆದೇಶ ಮಾಡಿದ್ದು, ಮುಂದಿನ 15 ದಿನಗಳಲ್ಲಿ ನಂಬರ್ ಫಲಕ ಉತ್ಪಾದಕರನ್ನು ಅಂತಿಮಗೊಳಿಸುವಂತೆ ನಿರ್ದೇಶಿಸಿದೆ.   ಆದರೆ, ಈ ಸಂಬಂಧಪಟ್ಟ ಪಾಲುದಾರರೊಂದಿಗೆ ನವೆಂಬರ್ ಮೊದಲ ವಾರದಲ್ಲಿ ಸಭೆ ಕರೆಯಲಾಗಿದೆ. ಜೊತೆಗೆ, ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.  ಇದನ್ನು ಪುರಸ್ಕರಿಸಿದ ಪೀಠವು ಮುಂದಿನ ವಿಚಾರಣೆವರೆಗೂ ಏಕ ಸದಸ್ಯ ಪೀಠದ ಆದೇಶವನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಪಿಐಎಲ್ ಮತ್ತು ಸರಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಒಟ್ಟಾಗಿ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ನ.22ಕ್ಕೆ ಮುಂದೂಡಿತು.   