ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣದ ಸಂಬಂಧ ಅಕ್ರಮ ಹಣ ವರ್ಗಾವಣೆಯಾಗಿರುವುದರಿಂದ ಪಿಎಂಎಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ದೂರು ನೀಡಿದ್ದಾರೆ.ವಂಚನೆಗೊಳಗಾದ ಸಿ.ಶಿವಮೂರ್ತಿ ಎಂಬುವವರು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿ ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಹಾಗೂ ಎನ್.ಪಿ.ಶೇಖರ್ ಎಂಬುವರು ಹಗರಿಬೊಮ್ಮನಹಳ್ಳಿಯ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಂತ ಹಂತವಾಗಿ 2 ಕೋಟಿ 3 ಲಕ್ಷ ರೂ. ಪಡೆದಿರುವ ಬಗ್ಗೆ ಆರೋಪಿಸಿರುವ ಹಿನ್ನೆಲೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಎಸ್.ಮನೋಹರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.  ರಾಜ್ಯ ಬಿಜೆಪಿ ಘಟಕದ ಪ್ರಮುಖ ನಾಯಕರು ಈ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಂದು ದೂರುದಾರರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತುರ್ತಾಗಿ ತನಿಖೆ ನಡೆಸಿ ಮಾಹಿತಿ ಒದಗಿಸಬೇಕೆಂದು ದೂರಿನಲ್ಲಿ ಎಸ್.ಮನೋಹರ್ ಮನವಿ ಮಾಡಿದ್ದಾರೆ.  