ಬೆಂಗಳೂರು, ಅ. 22: ʼಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಣೆಯಾಗಿದ್ದಾರೆʼ ಎಂದು ವಿಪಕ್ಷ ಬಿಜೆಪಿ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್‌, ಪ್ರಿಯಾಂಕ್‌ ಖರ್ಗೆ ಬಳಿಕ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್  ಅವರ ಭಾವ ಚಿತ್ರವುಳ್ಳ ಪೋಸ್ಟರ್‌ ಅನ್ನು X ಖಾತೆಯಲ್ಲಿ ಬಿಡುಗಡೆ ಮಾಡಿರುವ ಬಿಜೆಪಿ, ʼಗೃಹಲಕ್ಷ್ಮಿ ಹಣ ಕೊಡದೆ ಮಹಿಳೆಯರಿಗೆ ವಂಚಿಸಿ ಕಾಣೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ. ಹುಡುಕಿ ಕೊಟ್ಟವರ ಮನೆ ಬಾಗಿಲಿಗೆ ಉಚಿತ ಕುಕ್ಕರ್ ನೀಡುವುದು ಖಚಿತ,ನಿಶ್ಚಿತ,ಖಂಡಿತ’  ಎಂದು ಪೋಸ್ಟರ್‌ ನಲ್ಲಿ ಉಲ್ಲೇಖಿಸಿದೆ. ಕೆಲವು ದಿನಗಳ ಹಿಂದೆ, ‘ಡಿ.ಕೆ.ಶಿವಕುಮಾರ್​ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಂಡಿ’ ಎಂದು ಕಾಣೆಯಾದವರ ಜಾಹೀರಾತು ಮಾದರಿಯಲ್ಲಿ ಪೋಸ್ಟರ್​ ರಚಿಸಿ ರಾಜ್ಯ ಬಿಜೆಪಿಯ ಅಧಿಕೃತ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಬಿಜೆಪಿಯ ಈ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ ಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ʼʼಚುನಾವಣೆಯಲ್ಲಿ ಹೀನಾಯವಾಗಿ ಸೋತು, ಜನರಿಂದ ತಿರಸ್ಕಾರಕ್ಕೆ ಒಳಗಾಗಿ, ದೆಹಲಿಯಲ್ಲಿ ಮರ್ಯಾದೆ ಸಿಗದೆ, ರಾಜ್ಯದಲ್ಲಿ ಅಧಿಕಾರದ ಕುರ್ಚಿ ಸಿಗದೆ ಬಿಜೆಪಿಗರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆʼʼ ಎಂದು ಟೀಕಿಸಿದ್ದಾರೆ.  