ಜಂಬೂ ಸವಾರಿಯ ಆನೆಗಳು- ಸಂಗ್ರಹ ಚಿತ್ರ ಮೈಸೂರು,ಅ.21: ಮೈಸೂರು ದಸರಾ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್‌ ಕಾರ್ಡ್‌ ಮತ್ತು ಅರಮನೆ ಆವರಣ ಹಾಗೂ ಪಂಜಿನ ಕವಾಯತು ಟಿಕೆಟ್‍ಗಳ ಖರೀದಿಗೆ ಜಿಲ್ಲಾಡಳಿತ ಮತ್ತೆ ಅವಕಾಶ ಕಲ್ಪಿಸಿದೆ.ಅ.22ರಂದು ಬೆಳಗ್ಗೆ 10ಕ್ಕೆ https://mysoredasara.gov.in ಜಾಲತಾಣದಲ್ಲಿ ಆನ್‍ಲೈನ್‍ನಲ್ಲಿ ನಿಗದಿತ ಹಣ ಪಾವತಿಸಿ ಖರೀದಿಸಬಹುದಾಗಿದೆ. ಈಗಾಗಲೇ ಅ.18ರಂದು ಮಾರಾಟ ಪ್ರಕ್ರಿಯೆ ನಡೆದಿತ್ತು. ಒಂದೇ ತಾಸಿನಲ್ಲೇ ಎಲ್ಲವೂ ಬಿಕರಿಯಾಗಿದ್ದವು. ಆದಾಗ್ಯೂ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಗೋಲ್ಡ್‍ಕಾರ್ಡ್ ಹಾಗೂ ಟಿಕೆಟ್‍ಗಳನ್ನು ಮಾರಾಟ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ,ಎಷ್ಟು ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಲಭ್ಯವಿದೆ ಎನ್ನುವುದನ್ನು ತಿಳಿಸಿಲ್ಲ.ಗೋಲ್ಡ್ ಕಾರ್ಡ್‍ಗೆ ತಲಾ 6ಸಾವಿರ ನಿಗದಿಪಡಿಸಲಾಗಿದೆ. ಅರಮನೆ ಆವರಣದೊಳಗೆ ಮೆರವಣಿಗೆ ವೀಕ್ಷಣೆಯ ತಲಾ   3ಸಾವಿರದ ಒಟ್ಟು 400 ಟಿಕೆಟ್‍ಗಳು, ತಲಾ  2ಸಾವಿರದ ಒಟ್ಟು 600 ಟಿಕೆಟ್‍ಗಳು ಮತ್ತು ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ಟಿಕೆಟ್ ತಲಾ  500ರ ಒಟ್ಟು ಒಂದು ಸಾವಿರ ಟಿಕೆಟ್‍ಗಳು ಮಾರಾಟವಾಗಿದ್ದವು. ಇದರಿಂದ  89 ಲಕ್ಷ ವರಮಾನ ಬಂದಿತ್ತು.