ಬೆಂಗಳೂರು: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಲ್ಲಿನ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಹಾಗು ಬಿಜೆಪಿ ಪಾಲಿಗೆ ದೊಡ್ಡ ಮುಜುಗರವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಪರಶುರಾಮನ ಪ್ರತಿಮೆಯೇ ನಾಪತ್ತೆಯಾಗಿದ್ದು, ಇದೀಗ ಕಾಂಗ್ರೆಸ್‌ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ X ನಲ್ಲಿ ʼʼಪರಶುರಾಮನ ಪ್ರತಿಮೆ ಕಾಣೆಯಾಗಿದೆʼʼ ಎಂಬ ಪೋಸ್ಟರ್‌ ಹಂಚಿಕೊಂಡರುವ ಕಾಂಗ್ರೆಸ್‌, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಘೋಷಿಸಿದೆ. ʼʼಬಿಜೆಪಿಯ ಭ್ರಷ್ಟಾಚಾರ ಪರಶುರಾಮನನ್ನೂ ಬಿಡಲಿಲ್ಲ, ಧರ್ಮ ದ್ರೋಹಿ ಬಿಜೆಪಿ ಸರಕಾರ 14 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪರಶುರಾಮನ ಮೂರ್ತಿ ಕಾಣೆಯಾಗಿದೆ! “ಕಂಚಿನ“ ಪ್ರತಿಮೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಆದರೆ, ವಿಶೇಷ ಸೂಚನೆ ಏನೆಂದರೆ ʼʼಫೈಬರ್ ಪ್ರತಿಮೆ ತೋರಿಸಿ ಕಂಚು ಎಂದರೆ ಒಪ್ಪಲಾಗದುʼʼ ಎಂದು ಕಾಂಗ್ರೆಸ್‌ ಕಾಲೆಳೆದಿದೆ. ಕಾಂಗ್ರೆಸ್ ಹಂಚಿಕೊಂಡಿರುವ ಪೋಸ್ಟರ್‌ ಭಾರೀ ವಿವಾದ ಹಾಗೂ ಕೋಟ್ಯಂತರ ರೂ.ಗಳ ಅವ್ಯವಹಾರದ ಆರೋಪಕ್ಕೆ ಸಿಲುಕಿರುವ ಕಾರ್ಕಳ ತಾಲೂಕು ಬೈಲೂರು ಸಮೀಪದ ಉಮಿಕಲ್ ಬೆಟ್ಟದ ಮೇಲಿನ ಪರಶುರಾಮ ಮೂರ್ತಿ ಅಕ್ಟೋಬರ್‌ 13ರ ಬೆಳಗ್ಗೆ ದಿಢೀರನೇ ‘ಮಾಯ’ವಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಹಲವು ಸ್ಥಳೀಯರು ಆರೋಪಿಸಿದ್ದರು.  