ಸಾಂದರ್ಭಿಕ ಚಿತ್ರಬೆಂಗಳೂರು : ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಹವಮಾನ ಇಲಾಖೆಯು ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಎರಡು ದಿನಗಳಿಗೆ ಅನ್ವಯವಾಗುವಂತೆ ಅಲರ್ಟ್‍ಗಳನ್ನು ಘೋಷಿಸಲಾಗಿದೆ.   ಎರಡು ದಿನಗಳ ಕಾಲ ಕರಾವಳಿ ಜಿಲ್ಲೆ ಉಡುಪಿಗೆ ಕ್ರಮವಾಗಿ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಎರೆಡೂ ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.   ಉತ್ತರ ಒಳನಾಡಿನ ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಗೆ ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಭಾಗದ ಕಲಬುರರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಕೊಡಮಾಡಲಾಗಿದೆ.   ಮುಂದಿನ 48 ಗಂಟೆಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.  ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ.   ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.   