ದಾವಣಗೆರೆ, ಅ.16: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಐದು ವರ್ಷದ ಪುತ್ರಿ ಮತ್ತು ಆಕೆಯ ತಾಯಿಯ ಮೃತದೇಹ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ  ಸೂಳೆಕೆರೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.ಮೃತರನ್ನು ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದ ಮಂಜುನಾಥ ಎಂಬವರ ಪತ್ನಿ ಕವಿತಾ (27), ಪುತ್ರಿ ನಿಹಾರಿಕಾ (5) ಎಂದು ಗುರುತಿಸಲಾಗಿದೆ. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.  ಕವಿತಾ  ಕಳೆದ ಶುಕ್ರವಾರ ಮಗಳು ನಿಹಾರಿಕಾಳೊಂದಿಗೆ ಕಾಣೆಯಾಗಿರುವುದಾಗಿ ಪತಿ ಮಂಜುನಾಥ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು.   ಮೂಲತಃ ಎರೇಹಳ್ಳಿಯ ನಿವಾಸಿಯಾದ ಕವಿತಾ ರ ವಿವಾಹ ಆರು ವರ್ಷಗಳ ಹಿಂದೆ ಹೊನ್ನೆಬಾಗಿ ನಿವಾಸಿ ಮಂಜುನಾಥ್ ಜೊತೆ ನಡೆದಿತ್ತು.  ವರದಕ್ಷಿಣೆ ಕಿರುಕಳ ಆರೋಪ: ದೂರು  ಈ ನಡುವೆ ಕವಿತಾ ಪತಿ ಮಂಜುನಾಥ್ ಮತ್ತು ಆತನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಂಜುನಾಥ್ ಹಾಗೂ ಅವರ ಮನೆಯವರು ಕವಿತಾರಿಗೆ ನಿರಂತರ ವರದಕ್ಷಿಣೆ ಕಿರುಕಳ ನೀಡುತ್ತಿದ್ದರು. ಇದರಿಂದ ಬೇಸತ್ತು  ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕವಿತಾ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.   ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  