ಬೆಂಗಳೂರು, ಅ.15: ‘ಧಮ್ಮ ದೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಧಮ್ಮದ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಮ್ಮ ದೀಕ್ಷೆ ಎಂದರೆ, ಧಮ್ಮವನ್ನು ನಮ್ಮ ಹೃದಯದಿಂದ ಮನಸುಗೊಟ್ಟು ನೋಡುವುದು. ಬುದ್ಧರ ತತ್ವಗಳು ಸತ್ಯವಾಗಿರುವುದರಿಂದ ಬೌದ್ಧ ಧಮ್ಮವನ್ನು ನಾವು ಸತ್ಯ ಧಮ್ಮ ಎಂದೂ ಕರೆಯಬಹುದು’ ಎಂದು ಬೆಂಗಳೂರಿನ ಮಹಾಬೋಧಿ ಬೌದ್ಧ ವಿಹಾರದ ಭಂತೆ ಆನಂದ ಅವರು ತಿಳಿಸಿದ್ದಾರೆ.ರವಿವಾರ ದಲಿತ್ ಫೋರಮ್ ವತಿಯಿಂದ ನಗರದ ಮಹಾಬೋಧಿ ಬೌದ್ಧ ವಿಹಾರದಲ್ಲಿ ಆಯೋಜಿಸಿದ್ದ ‘ಬೌದ್ಧ ಧಮ್ಮ ಸ್ವೀಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೌದ್ಧ ಧಮ್ಮ ಎಂಬುದು ಮತ ಅಲ್ಲ, ಜಾತಿಯೂ ಅಲ್ಲ. ಬುದ್ಧ ಎಂದರೆ ವೈದ್ಯ, ಬೌದ್ಧ ಧಮ್ಮ ಎಂದರೆ ಔಷಧಿ. ಬೌದ್ಧ ಭಿಕ್ಕುಗಳು ಎಂದರೆ ನರ್ಸ್‍ಗಳು. ಜನಸಾಮಾನ್ಯರು ಈ ಮೂವರ ನೆರವಿನಿಂದ ಒಳ್ಳೆಯ ಮನಸನ್ನು ಬೆಳೆಸಿಕೊಳ್ಳಬೇಕು. ಸುಖವನ್ನು, ನೆಮ್ಮದಿಯನ್ನು, ಶಾಂತಿಯನ್ನು ಪಡೆದುಕೊಳ್ಳಬೇಕು. ಮೈತ್ರಿಭಾವನೆ ಎಲ್ಲೆಡೆ ಬೆಳಗುವಂತೆ ನೋಡಿಕೊಳ್ಳಬೇಕು ಎಂದರು.  ಕಾರ್ಯಕ್ರಮದಲ್ಲಿ ಲೇಖಕ ಮಂಗ್ಳೂರ ವಿಜಯ ಸೇರಿದಂತೆ ಒಟ್ಟು 36 ಜನರು ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದುಕೊಂಡರು. ಇಂದು ಬೌದ್ಧ ಧಮ್ಮ ಸ್ವೀಕರಿಸಿದವರ ಪೈಕಿ ಅತ್ಯಂತ ಕಿರಿಯ ಸದಸ್ಯರು 3 ವರ್ಷದ ಮಗು ವೀತನ್ ಆಗಿದ್ದು ವಿಶೇಷವಾಗಿತ್ತು. ಭೌತಶಾಸ್ತ್ರ ಉಪನ್ಯಾಸಕ ಸುಭಾಸಚಂದ್ರ, ಮೆಡಿಕಲ್ ಕಾಲೇಜಿನ ಗ್ರಂಥಾಲಯಾಧಿಕಾರಿ ಶ್ರೀನಿವಾಸ್, ಉಪನ್ಯಾಸಕ ಉಮೇಶ್, ಶಿಕ್ಷಣ ಇಲಾಖೆಯ ಪ್ರಕಾಶ್, ಪೊಲೀಸ್ ಇಲಾಖೆಯ ಪ್ರಭಾಕರ್ ತಮ್ಮ ಕುಟುಂಬದ ಸದಸ್ಯರುಗಳೊಂದಿಗೆ ಬೌದ್ಧ ಧಮ್ಮವನ್ನು ಸೇರಿಕೊಂಡರು.   