ಬೆಂಗಳೂರು, ಅ.14: ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.ವಂಚನೆ ಆರೋಪದಡಿ ಬಂಧನಕ್ಕೊಳಗಾಗಿರುವ ಸಂಘ ಪರಿವಾರದ ಕಾರ್ಯಕರ್ತೆ ಚೈತ್ರಾ ಪ್ರಕರಣದಲ್ಲಿ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ನಡೆಸಿಲ್ಲ ಏಕೆ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಐಟಿ ದಾಳೆ ಮಾಡುತ್ತಿದ್ದಾರೆ. ತನಿಖೆ ಆಗಬೇಕು, ಉಪ್ಪು ತಿಂದೋರು ನೀರು ಕುಡಿಯಲೇಬೇಕು. ಅಲ್ಲದೆ, ಇತ್ತೀಚಿಗೆ ಚೈತ್ರಾ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಏಕೆ ಮೊಕದ್ದಮೆ ದಾಖಲಿಸಿ ದಾಳಿ ನಡೆಸಿಲ್ಲ ಎಂದರು.  ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಇಲಾಖೆಗಳು ಎಲ್ಲವೂ ಬಿಜೆಪಿಯವರ ಕೈಯಲ್ಲಿಯೇ ಇದೆ ಎಂದ ಅವರು, ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ವಿಲೀನ ಆಗಿಬಿಟ್ಟಿದ್ದಾರೆ. ಹೀಗಾಗಿ, ಅವರು ನೇರವಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡ್ತಾರೆ. ಡೈರಿ, ಪೆನ್‍ಡ್ರೈವ್ ನೀಡಲಿ ಎಂದು ಸವಾಲು ಹಾಕಿದರು.   ಬಿಜೆಪಿ ಮನೆ ಒಂದು ಬಾಗಿಲು ನೂರಾಗಿದೆ. ಯಾರು ನಾಯಕ ಎಂದೇ ಗೊತ್ತಿಲ್ಲ. ಮೈತ್ರಿ ಸಂದರ್ಭದಲ್ಲೂ ಓರ್ವ ಬಿಜೆಪಿ ನಾಯಕನೂ ಇರಲಿಲ್ಲ. ಮತ್ತೊಂದೆಡೆ, ಜನತಾದಳ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ.ಇನ್ನೂ, ರಾಜ್ಯ ಸರಕಾರದ ಕುರಿತು ಸುಳ್ಳು ಆಪಾದನೆ ಮಾಡುವ ಬದಲು ದಾಖಲೆ ನೀಡಲಿ ಎಂದು ಅವರು ನುಡಿದರು.  